ಕಾಂಗ್ರೆಸ್ ನಾಯಕರ ಕುರಿತು ಅಸಂಬದ್ಧ ಪದ ಬಳಕೆ: ವಿಜಯೇಂದ್ರ ಕ್ಷಮೆಯಾಚನೆ
ಕಾಂಗ್ರೆಸ್ ನಾಯಕರ ವಿರುದ್ಧ 'ಈ ನನ್ನ ಮಕ್ಕಳು' ಎಂದು ಏಕವಚನದಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕ್ಷಮೆಯಾಚಿಸಿದ್ದಾರೆ.
BY-Vijayendra-apologises-after-Congress-poster-war-over-remark


ಬೆಂಗಳೂರು, 03 ನವೆಂಬರ್ (ಹಿ.ಸ.):

ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊನೆಗೂ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ.

ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಸುತ್ತಮುತ್ತ ಪೋಸ್ಟರ್ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘RTGS ಚೋರ್ ಬಿ.ವೈ. ವಿಜಯೇಂದ್ರ’, ‘ನೀನು ಹೇಡಿ, RTGS ಕೇಡಿ’ ಎಂಬ ಘೋಷಣೆಗಳಿರುವ ಪೋಸ್ಟರ್ಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರ, ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಹಾಲಿನ ದರ ಏರಿಕೆ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದರು.

ಈ ವೇಳೆ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ, ಅಸಂಬದ್ಧ ಪದ ಬಳಕೆ ಮಾಡಿ ಏಕವಚನದಲ್ಲಿ ಮಾತನಾಡಿದ್ದರು.

ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಜಯೇಂದ್ರ ಅವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ ಹಾಗೂ ವಿಜಯೇಂದ್ರ ಅವರ ಮನೆ ಸುತ್ತಮುತ್ತ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.

ಪೋಸ್ಟರ್ಗಳಲ್ಲಿ RTGS ಚೋರ್ ಬಿ.ವೈ. ವಿಜಯೇಂದ್ರ ಹಾಗೂ ನೀನು ಹೇಡಿ, RTGS ಕೇಡಿ ಎಂಬ ಘೋಷಣೆಗಳನ್ನು ಬರೆಯಲಾಗಿದೆ. ವಿಜಯೇಂದ್ರ ವಿರುದ್ಧದ ಹಳೆಯ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಈ ಅಭಿಯಾನ ನಡೆಸಿದ್ದಾರೆ. ರಾಜಾಜಿನಗರ ಮತ್ತು ಮಂಜುನಾಥನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿಯೂ ಪೋಸ್ಟರ್ಗಳನ್ನು ಅಂಟಿಸಲಾಗಿದೆ.

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡುವಾಗ ಕೆಲವು ಪದಗಳನ್ನು ಬಳಸಿರುವುದು ನಿಜ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ನವರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.

ಆದರೆ ನಾನು ಉದ್ದೇಶಪೂರ್ವಕವಾಗಿ ಅಥವಾ ಯಾರನ್ನಾದರೂ ಅವಮಾನಿಸಬೇಕು ಎಂಬ ಆಲೋಚನೆಯಿಂದ ಆ ಪದಗಳನ್ನು ಬಳಸಿಲ್ಲ. ಮೀಸಲಾತಿ, ಕೆಪಿಎಸ್ಸಿ ವಿಚಾರವಾಗಿ ಮಾತನಾಡುವಾಗ ಆಡುಭಾಷೆಯಲ್ಲಿ ಆ ಶಬ್ದ ಬಂದಿದೆಯೇ ವಿನಃ ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ವಿಜಯೇಂದ್ರ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮೂರು ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.

ಇದೀಗ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಅಭಿಯಾನ ಹಾಗೂ ನಾಯಕರ ಆಕ್ರೋಶದ ನಡುವೆಯೇ ವಿಜಯೇಂದ್ರ ಕ್ಷಮೆಯಾಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande