ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ಹರಿದ್ವಾರಕ್ಕೆ ಪಾರ್ಥಿವ ಶರೀರ ರವಾನೆ
ಯಮಕೇಶ್ವರ (ಪೌರಿ ಗರ್ವಾಲ್), 21 ನವೆಂಬರ್ (ಹಿ.ಸ.): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಿ ದೇವಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಶನಿವಾರ ಬೆಳಗ್ಗೆ ಅವರ ಪಾರ್ಥಿವ ಶರೀರದೊಂದಿಗೆ ಹರಿದ್ವಾರಕ್ಕೆ ಪ್ರಯಾಣ ಬೆಳೆಸಿದರು. ಉತ್ತರಾಖಂಡದ ಪೌರಿ ಗಢ್ವಾಲ್ ಜಿಲ
उत्तर प्रदेश के मुख्यमंत्री योगी आदित्यनाथ पंचूर गांव से अपनी दिवंगत माता सावित्री देवी की पार्थिव  शरीर  को कंधा देते हुए।


ಯಮಕೇಶ್ವರ (ಪೌರಿ ಗರ್ವಾಲ್), 21 ನವೆಂಬರ್ (ಹಿ.ಸ.):

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಿ ದೇವಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಶನಿವಾರ ಬೆಳಗ್ಗೆ ಅವರ ಪಾರ್ಥಿವ ಶರೀರದೊಂದಿಗೆ ಹರಿದ್ವಾರಕ್ಕೆ ಪ್ರಯಾಣ ಬೆಳೆಸಿದರು.

ಉತ್ತರಾಖಂಡದ ಪೌರಿ ಗಢ್ವಾಲ್ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ಯೋಗಿ ಆದಿತ್ಯನಾಥ್ ಅವರ ಸ್ವಗ್ರಾಮ ಪಂಚೂರ್‌ನಿಂದ ಶನಿವಾರ ಬೆಳಗ್ಗೆ 8.57ಕ್ಕೆ ಅಂತಿಮ ಯಾತ್ರೆ ಆರಂಭವಾಯಿತು. ತಾಯಿಯ ಪಾರ್ಥಿವ ಶರೀರದೊಂದಿಗೆ ಯೋಗಿ ಆದಿತ್ಯನಾಥ್ ಅವರು ಲಕ್ಷ್ಮಣ ಝೂಲಾ–ಕಾಂಡಿ ರಸ್ತೆ ಮಾರ್ಗವಾಗಿ ಹರಿದ್ವಾರದತ್ತ ತೆರಳಿದರು.

ತಾಯಿಯ ನಿಧನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದ ಶ್ಲೋಕವೊಂದನ್ನು ಹಂಚಿಕೊಂಡು ತಾಯಿಯ ಮೇಲಿನ ಪ್ರೀತಿ, ಗೌರವ ಹಾಗೂ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

'ನಾಸ್ತಿ ಮಾತೃಸಮಾ ಛಾಯಾ ನಾಸ್ತಿ ಮಾತೃಸಮಾ ಗತಿಃ। ನಾಸ್ತಿ ಮಾತೃಸಮಂ ತ್ರಾಣಂ ನಾಸ್ತಿ ಮಾತೃಸಮಾ ಪ್ರಿಯಾ॥' ಎಂಬ ಶ್ಲೋಕವನ್ನು ಅವರು ಹಂಚಿಕೊಂಡಿದ್ದಾರೆ. ತಾಯಿಗೆ ಸಮಾನವಾದ ನೆರಳು, ಆಶ್ರಯ, ರಕ್ಷಣೆ ಹಾಗೂ ಪ್ರೀತಿಯು ಬೇರೊಂದಿಲ್ಲ ಎಂಬ ಅರ್ಥವನ್ನು ಈ ಶ್ಲೋಕ ಒಳಗೊಂಡಿದೆ.

ಸಾವಿತ್ರಿ ದೇವಿ ಅವರು ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಗೆ ಪಂಚೂರ್ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು, ಸಂಬಂಧಿಕರು, ಗ್ರಾಮಸ್ಥರು ಹಾಗೂ ಹಿತೈಷಿಗಳಲ್ಲಿ ದುಃಖ ಮಡುಗಟ್ಟಿತ್ತು. ತಾಯಿಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಂಚೂರ್‌ಗೆ ಆಗಮಿಸಿದ್ದರು.

ಶನಿವಾರ ಬೆಳಗ್ಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಾವಿತ್ರಿ ದೇವಿ ಅವರ ಅಂತಿಮ ಯಾತ್ರೆ ಆರಂಭಗೊಂಡಿತು. ಹರಿದ್ವಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಸಾವಿತ್ರಿ ದೇವಿ ಅವರ ನಿಧನಕ್ಕೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande