ಚಾಕು ತೋರಿಸಿ ಬೆದರಿಸಿ ಕುರಿ ಹೊತ್ತೊಯ್ದ ದುಷ್ಕರ್ಮಿಗಳು
ಬಾಗಲಕೋಟೆ, 21 ನವೆಂಬರ್ (ಹಿ.ಸ.) ಬದಾಮಿ ತಾಲೂಕಿನ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ಮಧ್ಯರಾತ್ರಿ ವೇಳೆ ಕುರಿ ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಚಾಕು ತೋರಿಸಿ ಬೆದರಿಸಿ ಕುರಿಯನ್ನು ಕದ್ದೊಯ್ದಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಎಲ್ಲಪ್ಪ ಶಂಕ್ರಪ್ಪ ಕೊಪ್ಪದ ಅವರಿಗೆ
ಕುರಿ ಕಳ್ಳತನ


ಬಾಗಲಕೋಟೆ, 21 ನವೆಂಬರ್ (ಹಿ.ಸ.)

ಬದಾಮಿ ತಾಲೂಕಿನ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ಮಧ್ಯರಾತ್ರಿ ವೇಳೆ ಕುರಿ ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಚಾಕು ತೋರಿಸಿ ಬೆದರಿಸಿ ಕುರಿಯನ್ನು ಕದ್ದೊಯ್ದಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಎಲ್ಲಪ್ಪ ಶಂಕ್ರಪ್ಪ ಕೊಪ್ಪದ ಅವರಿಗೆ ಸೇರಿದ ಕುರಿದೊಡ್ಡಿಯನ್ನು ಗುರಿಯಾಗಿಸಿಕೊಂಡು ಬಂದಿದ್ದ ಸುಮಾರು 4ರಿಂದ 5 ಜನರ ಗುಂಪು ಮಧ್ಯರಾತ್ರಿ ವೇಳೆ ಕುರಿದೊಡ್ಡಿಗೆ ನುಗ್ಗಿದೆ. ಈ ವೇಳೆ ಅಲ್ಲಿದ್ದ ಕುರಿಗಳ ಪೈಕಿ ಒಂದು ಕುರಿಯನ್ನು ಕದ್ದುಕೊಂಡು ಹೋಗಿದ್ದಾರೆ. ಕಳ್ಳತನದ ಸಂದರ್ಭದಲ್ಲಿ ಚಾಕು ತೋರಿಸಿ ಭಯ ಹುಟ್ಟಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಶಂಕರಪ್ಪ ತಿಳಿಸಿದ್ದಾರೆ.

ಮಧ್ಯರಾತ್ರಿ ವೇಳೆ ನಡೆದ ಈ ಘಟನೆಯಿಂದ ಯರಗೊಪ್ಪ ಎಸ್.ಬಿ. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುರಿ, ದನ ಸೇರಿದಂತೆ ಜಾನುವಾರುಗಳ ಕಳ್ಳತನದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಮತ್ತು ಪಶುಸಂಗೋಪನೆ ಅವಲಂಬಿಸಿರುವ ಕುಟುಂಬಗಳು ಕಳವಳ ವ್ಯಕ್ತಪಡಿಸುತ್ತಿವೆ.

ರಾತ್ರಿ ವೇಳೆ ಜನರು ಗಾಢ ನಿದ್ರೆಯಲ್ಲಿರುವ ಸಮಯವನ್ನೇ ದುಷ್ಕರ್ಮಿಗಳು ದುರುಪಯೋಗಪಡಿಸಿಕೊಂಡು ಇಂತಹ ಕೃತ್ಯಗಳಿಗೆ ಮುಂದಾಗುತ್ತಿರುವುದು ಗ್ರಾಮೀಣ ಪ್ರದೇಶಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಅದರಲ್ಲೂ ಚಾಕು ತೋರಿಸಿ ಬೆದರಿಸುವ ಮೂಲಕ ಕಳ್ಳತನ ನಡೆಸಿರುವುದು ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸಲು ಮನವಿ

ಯರಗೊಪ್ಪ ಎಸ್.ಬಿ. ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ರಾತ್ರಿ ವೇಳೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಗ್ರಾಮದಲ್ಲಿ ಸಂಚರಿಸುವುದು ಕಂಡುಬಂದರೆ ತಕ್ಷಣ ಗಮನಹರಿಸಿ, ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು. ಕುರಿದೊಡ್ಡಿ, ದನದ ಕೊಟ್ಟಿಗೆ ಮತ್ತು ಮನೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಅಲ್ಲದೆ, ಗ್ರಾಮಸ್ಥರು ಪರಸ್ಪರ ಸಹಕಾರದೊಂದಿಗೆ ರಾತ್ರಿ ಪಾಳಿಯಲ್ಲಿ ಕಾವಲು ಕಾಯುವ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಸ್ವತಃ ಎದುರಿಸಲು ಮುಂದಾಗದೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು ಹಾಗೂ ಕುರಿ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande