ವಿಜ್ಞಾನ ಪ್ರದರ್ಶನಗಳು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಲಿ: ಬಾದವಾಡಗಿ
ಗದಗ, 21 ನವೆಂಬರ್ (ಹಿ.ಸ.) ವಿಜ್ಞಾನ ಪ್ರದರ್ಶನಗಳು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಹೊಸ ಚಿಂತನೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ವೇದಿಕೆಗಳಾಗಬೇಕು. ಮೂಢನಂಬಿಕೆಗಳನ್ನು ಹೋಗಲಾಡಿಸುವುದು, ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು
ಫೋಟೋ


ಗದಗ, 21 ನವೆಂಬರ್ (ಹಿ.ಸ.)

ವಿಜ್ಞಾನ ಪ್ರದರ್ಶನಗಳು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಹೊಸ ಚಿಂತನೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ವೇದಿಕೆಗಳಾಗಬೇಕು. ಮೂಢನಂಬಿಕೆಗಳನ್ನು ಹೋಗಲಾಡಿಸುವುದು, ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಬಯಲಿಗೆಳೆಯುವುದು ಹಾಗೂ ಸಮಾಜದಲ್ಲಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನ ಮಾದರಿಗಳು ರೂಪುಗೊಳ್ಳಬೇಕು ಎಂದು ಜಮಖಂಡಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕರು ಹಾಗೂ ಪದನಿಮಿತ್ತ ಪ್ರಾಚಾರ್ಯ ವೈ.ಬಿ. ಬಾದವಾಡಗಿ ಅವರು ಹೇಳಿದರು.

ಗದಗ ನಗರದ ಶಾಸ್ತ್ರೀಜಿ ಬಿ.ಎಡ್. ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ಮೌಢ್ಯಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವೈಜ್ಞಾನಿಕ ಮನೋಭಾವದೊಂದಿಗೆ ಸಮಾಜದಲ್ಲಿ ವೈಚಾರಿಕತೆ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕನಕದಾಸ ಶಿಕ್ಷಣ ಸಮಿತಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಈಶ್ವರ ಪಟ್ಟಣಶೆಟ್ಟಿ ಅವರು, ಭವಿಷ್ಯದಲ್ಲಿ ಜಲಜನಕವನ್ನು ಇಂಧನವಾಗಿ ಬಳಸುವ ಸಾಧ್ಯತೆಗಳು ಹಾಗೂ ಗುರುತ್ವಾಕರ್ಷಣೆಯ ಕ್ಷೇತ್ರದಲ್ಲಿ ಇನ್ನೂ ಅನೇಕ ಸಂಶೋಧನೆಗಳು ನಡೆಯಬೇಕಿವೆ. ವಿಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆಗೆ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಕುತೂಹಲ ಮತ್ತು ಪ್ರಯತ್ನಶೀಲತೆಯಿಂದ ಹೊಸ ಆವಿಷ್ಕಾರಗಳತ್ತ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ನೋಡಲ್ ಅಧಿಕಾರಿಗಳಾದ ಜಿ.ಡಿ. ದಾಸರ ಅವರು, ವಿಜ್ಞಾನ ಮಾದರಿ ಪ್ರದರ್ಶನದ ಉದ್ದೇಶ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಮಹತ್ವವನ್ನು ವಿವರಿಸಿದರು. ಜೊತೆಗೆ ಆರೋಗ್ಯಕರ ಜೀವನಕ್ಕೆ ನೀರು, ನಾರಿನಂಶಯುಕ್ತ ಆಹಾರ ಪದಾರ್ಥಗಳ ಸೇವನೆಯ ಅಗತ್ಯವನ್ನು ತಿಳಿಸಿ, ಪೇರಲ, ಸೀಬೆ ಹಾಗೂ ದಾಳಿಂಬೆಯಂತಹ ಹಣ್ಣುಗಳ ಪೌಷ್ಟಿಕಾಂಶದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಕೆ.ಡಿ. ಬಡಿಗೇರ ಮಾತನಾಡಿ, ನಂಬಿಕೆ ಇರಲಿ, ಆದರೆ ಮೂಢನಂಬಿಕೆ ಇರಬಾರದು ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ಸಹ ನಿರ್ದೇಶಕ ವೈ.ಬಿ. ಬಾದವಾಡಗಿ, ಉಪನಿರ್ದೇಶಕ ಕೆ.ಡಿ. ಬಡಿಗೇರ ಹಾಗೂ ನೋಡಲ್ ಅಧಿಕಾರಿ ಜಿ.ಡಿ. ದಾಸರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಂಗಾಧರಯ್ಯ ಹಿರೇಮಠ ಅವರು ವಹಿಸಿದ್ದರು. ವೇದಿಕೆಯಲ್ಲಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟಪ್ಪನವರು, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಡಯಟ್ನ ಹಿರಿಯ ಉಪನ್ಯಾಸಕ ಬಿ.ಎಫ್. ಅರವಟಗಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್.ಪಿ. ಪ್ರಭಯನಮಠ, ಎಲ್.ಬಿ. ಹುಡೇದ, ಶಾಸ್ತ್ರೀಜಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಮತಿ ಶಿಲ್ಪಾ ಹೊನಗುಡಿ, ಶಿವರಾಜ ಹಿರೇಮಠ, ಎಂ.ಬಿ. ಸೋಲಾಪುರ, ಐ.ಬಿ. ಮಡಿವಾಳರ, ಕಿನ್ನಾಳ ಸೇರಿದಂತೆ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರು, ನಿರ್ಣಾಯಕರು, ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಶಿಕ್ಷಕರು ಉಪಸ್ಥಿತರಿದ್ದರು.

ಆರಂಭದಲ್ಲಿ ಕುಮಾರಿ ವೈಷ್ಣವಿ ಅಂಬೋರೆ ಪ್ರಾರ್ಥನೆ ಸಲ್ಲಿಸಿದರು. ಜಿ.ಡಿ. ದಾಸರ ಸ್ವಾಗತಿಸಿದರು. ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ವಂದಿಸಿದರು. ಎನ್.ಎಚ್. ನಾಗೂರ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ತಮ್ಮ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಹಾಗೂ ಅನ್ವೇಷಣಾ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.

ವೈಯಕ್ತಿಕ ವಿಭಾಗದಲ್ಲಿ

ಪ್ರಥಮ - ಆದರ್ಶ ಎಬಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ನರಗುಂದ

ದ್ವಿತೀಯ- ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯ ಇಟಗಿ ತಾಲೂಕು ರೋಣ

ತೃತೀಯ - ಸರ್ಕಾರಿ ಪ್ರೌಢಶಾಲೆ ಹಳ್ಳಿಗುಡಿ ತಾಲೂಕ ಮುಂಡರಗಿ

ಗುಂಪು ವಿಭಾಗದಲ್ಲಿ

ಪ್ರಥಮ - ಓಂ ಸಾಯಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಜೇಂದ್ರಗಡ

ದ್ವಿತೀಯ- ಸರ್ಕಾರಿ ಪ್ರೌಢಶಾಲೆ ಹೆಸರೂರ ತಾಲೂಕು ಮುಂಡರಗಿ

ತೃತೀಯ - ಸರ್ಕಾರಿ ಪ್ರೌಢಶಾಲೆ ಶಿರಂಜ ಗದಗ ಗ್ರಾಮೀಣ

ಶಿಕ್ಷಕರ ವಿಭಾಗದಲ್ಲಿ

ಜಯಶ್ರೀ ಕುಂದರಗಿ

ಸರ್ಕಾರಿ ಪ್ರೌಢಶಾಲೆ ಅಂತೂರಬಾದವಾಡಗಿ

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande