ಬಿಸಿಯೂಟ ಕಾರ್ಮಿಕರ ಬಾಕಿ ಗೌರವಧನ ತಕ್ಷಣ ಬಿಡುಗಡೆಗೆ ಕಾರ್ಮಿಕರ ಸಂಘಟನೆ ಆಗ್ರಹ
ಬೆಂಗಳೂರು, 21 ನವೆಂಬರ್ (ಹಿ.ಸ.): ರಾಜ್ಯದ ಬಿಸಿಯೂಟ ಕಾರ್ಮಿಕರಿಗೆ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘಟನೆಯ ರಾಜ್
ಸಂಘಟನೆಯ ಪದಾಧಿಕಾರಿಗಳು


ಬೆಂಗಳೂರು, 21 ನವೆಂಬರ್ (ಹಿ.ಸ.):

ರಾಜ್ಯದ ಬಿಸಿಯೂಟ ಕಾರ್ಮಿಕರಿಗೆ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘಟನೆಯ ರಾಜ್ಯ ನಿಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಜಂಟಿ ನಿರ್ದೇಶಕ ಗಣಪತಿ ಭಟ್ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಧಾರವಾಡ, ವಿಜಯಪುರ, ಮೈಸೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಬಿಸಿಯೂಟ ಕಾರ್ಮಿಕರಿಗೆ ಬರಬೇಕಿರುವ ಗೌರವಧನ ಇನ್ನೂ ಅವರ ಖಾತೆಗಳಿಗೆ ಜಮೆಯಾಗಿಲ್ಲ. ಈ ಕುರಿತು ನಿಯೋಗದ ಪದಾಧಿಕಾರಿಗಳು ಅಧಿಕಾರಿಗಳ ಗಮನ ಸೆಳೆದು ಬಾಕಿ ಪಾವತಿಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.

ಗೌರವಧನ ಪಾವತಿಗೆ ತಾಂತ್ರಿಕ ಅಡ್ಡಿ

ಕೇಂದ್ರ ಸರ್ಕಾರದ ಪಾಲಿನ 1,000 ರೂ. ಗೌರವಧನವನ್ನು ಸ್ಪರ್ಶ್ ವ್ಯವಸ್ಥೆಯ ಮೂಲಕ ಪಾವತಿಸಲಾಗುತ್ತಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಹಣ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ವಿಷಯ ಅಧಿಕಾರಿಗಳೊಂದಿಗಿನ ಚರ್ಚೆಯಲ್ಲಿ ತಿಳಿದುಬಂದಿದೆ.

ಇದಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾಲಿನ ಗೌರವಧನವನ್ನು ಕಾರ್ಮಿಕರಿಗೆ ಪಾವತಿಸುವ ಮೊದಲು ಮತ್ತೊಮ್ಮೆ ದೃಢೀಕರಣ ಸಹಿ ಪಡೆಯುವ ಹೊಸ ನಿಯಮ ಜಾರಿಗೆ ತಂದಿರುವುದರಿಂದ ಬಡ ಕಾರ್ಮಿಕರಿಗೆ ಸಕಾಲದಲ್ಲಿ ಹಣ ತಲುಪಲು ತೊಂದರೆಯಾಗುತ್ತಿದೆ ಎಂದು ನಿಯೋಗ ಆಕ್ಷೇಪ ವ್ಯಕ್ತಪಡಿಸಿತು.

ಶೀಘ್ರ ಬಾಕಿ ಹಣ ಬಿಡುಗಡೆಗೆ ಭರವಸೆ

ಗೌರವಧನ ಪಾವತಿಯಲ್ಲಿ ತಾಂತ್ರಿಕ ದೋಷಗಳಿಂದ ವಿಳಂಬವಾಗುತ್ತಿದೆ. ಸಂಬಂಧಪಟ್ಟ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ ಬಾಕಿ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಸಂಘಟನೆಯ ರಾಜ್ಯ ಅಧ್ಯಕ್ಷೆ ಶಾಂತಾ ಎ., ರಾಜ್ಯ ಕಾರ್ಯದರ್ಶಿ ಸಂಧ್ಯಾ ಪಿ.ಎಸ್. ಹಾಗೂ ರಾಜ್ಯ ಖಜಾಂಚಿ ಭುವನಾ ಅವರು ನಿಯೋಗದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande