
ಬಾಗಲಕೋಟೆ, 21 ನವೆಂಬರ್ (ಹಿ.ಸ.)
ಹುನಗುಂದ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಕಳೆದ ಎರಡೂವರೆ ದಶಕಗಳಿಂದ ಚರ್ಚೆಯಲ್ಲಿರುವ ಸ್ಥಳೀಯರು ಮತ್ತು ವಲಸಿಗರು ಎಂಬ ರಾಜಕೀಯ ಸಂಘರ್ಷಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಉದ್ಯಮಗಳ ಪುನಶ್ಚೇತನದಂತಹ ಹತ್ತು ಹಲವು ಜ್ವಲಂತ ಸಮಸ್ಯೆಗಳಿದ್ದರೂ, ರಾಜಕೀಯ ನಾಯಕರು ಸ್ಥಳೀಯರು ಮತ್ತು ಹೊರಗಿನವರು ಎಂಬ ವಿಚಾರವನ್ನೇ ರಾಜಕೀಯ ಚರ್ಚೆಯ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಪ್ರಸ್ತುತ ಹುನಗುಂದ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿಜಯಾನಂದ ಕಾಶಪ್ಪನವರ ಮತ್ತು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ನಡುವಿನ ರಾಜಕೀಯ ವಾಗ್ದಾಳಿ ಮತ್ತೆ ಸ್ಥಳೀಯ ಮತ್ತು ವಲಸಿಗ ಚರ್ಚೆಗೆ ಕಾರಣವಾಗಿದೆ.
ಸಚಿವ ವಿಜಯಾನಂದ ಕಾಶಪ್ಪನವರ ಅವರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಕ್ಷೇತ್ರದ ಹೊರಗಿನವರು, ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬಂದು ಪತ್ರಿಕಾಗೋಷ್ಠಿ ನಡೆಸಿ ತೆರಳುತ್ತಾರೆ ಎಂಬ ರೀತಿಯ ಟೀಕೆಗಳನ್ನು ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಪ್ರತಿಯಾಗಿ ದೊಡ್ಡನಗೌಡ ಪಾಟೀಲರು, ಸಚಿವ ಕಾಶಪ್ಪನವರ ವಿರುದ್ಧ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಏನು ಅಭಿವೃದ್ಧಿ ಕೆಲಸಗಳಾಗಿವೆ? ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇಬ್ಬರು ನಾಯಕರ ನಡುವಿನ ಈ ಆರೋಪ-ಪ್ರತ್ಯಾರೋಪಗಳ ನಡುವೆ ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ ಕುರಿತು ಚರ್ಚೆ ನಡೆಯುತ್ತಿದೆ.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ರಾಜಕೀಯ ವಾಗ್ವಾದದ ಪ್ರಮುಖ ವಿಷಯವಾಗಿದೆ. ಗಮನಾರ್ಹ ಸಂಗತಿಯೆಂದರೆ, ಒಂದೇ ದಿನ ಕುಡಿಯುವ ನೀರಿನ ಸಮಸ್ಯೆ ಮುಂದಿಟ್ಟುಕೊಂಡು ಒಂದು ಕಡೆ ಪ್ರತಿಭಟನೆ ನಡೆದರೆ, ಮತ್ತೊಂದೆಡೆ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಬೆಳವಣಿಗೆ ಕ್ಷೇತ್ರದ ಜನರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ ಸಿಗಲಿದೆ? ಘೋಷಣೆಯಾದ ಕಾಮಗಾರಿಗಳು ಯಾವಾಗ ಪೂರ್ಣಗೊಳ್ಳಲಿವೆ? ಜನರಿಗೆ ಸಮರ್ಪಕ ನೀರು ಪೂರೈಕೆ ಯಾವಾಗ ಸಾಧ್ಯವಾಗಲಿದೆ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಬಾಗಲಕೋಟೆ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಹೊರಗಿನ ಕ್ಷೇತ್ರಗಳಿಂದ ಬಂದು ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಹಲವು ಉದಾಹರಣೆಗಳಿವೆ. ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಸಿದ್ದರಾಮಯ್ಯ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಎಸ್. ನಿಜಲಿಂಗಪ್ಪ ಅವರು ತೇರದಾಳ, ಸಿದ್ದರಾಮಯ್ಯ ಅವರು ಬಾದಾಮಿ ಹಾಗೂ ಉಮಾಶ್ರೀ ಅವರು ತೇರದಾಳ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಿರುವಾಗ ವಲಸಿಗರು ಎಂಬ ವಿಚಾರವನ್ನು ಪದೇಪದೇ ರಾಜಕೀಯ ಚರ್ಚೆಗೆ ತರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಹುನಗುಂದ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸಚಿವರಾಗಿರುವ ವಿಜಯಾನಂದ ಕಾಶಪ್ಪನವರ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ತಮ್ಮ ತಮ್ಮ ಅವಧಿಯಲ್ಲಿ ಕ್ಷೇತ್ರದ ಜನರಿಂದ ಜನಾದೇಶ ಪಡೆದಿದ್ದಾರೆ.
ಹೀಗಿರುವಾಗ ಮೂರು ಬಾರಿ ಜನರಿಂದ ಆಯ್ಕೆಯಾದ ಮಾಜಿ ಶಾಸಕರನ್ನು ಇಂದಿಗೂ ವಲಸಿಗರು ಎಂದು ಕರೆಯುವ ರಾಜಕೀಯ ಬೆಳವಣಿಗೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಇಬ್ಬರೂ ನಾಯಕರು ತಮ್ಮದೇ ಆದ ಜವಾಬ್ದಾರಿಯನ್ನು ನಿರ್ವಹಿಸಬೇಕೆಂಬುದು ಜನರ ನಿರೀಕ್ಷೆಯಾಗಿದೆ.
ಕೆಂಪುಶಿಲೆ ಗ್ರಾನೈಟ್ ಉದ್ಯಮಕ್ಕೆ ಬೇಕಿದೆ ಪುನಶ್ಚೇತನ
ಇಳಕಲ್-ಹುನಗುಂದ ಅವಳಿ ತಾಲೂಕುಗಳ ಆರ್ಥಿಕತೆಯಲ್ಲಿ ಒಂದು ಕಾಲದಲ್ಲಿ ಗ್ರಾನೈಟ್ ಉದ್ಯಮ ಪ್ರಮುಖ ಪಾತ್ರ ವಹಿಸಿತ್ತು. ವಿಶೇಷವಾಗಿ ಕೆಂಪುಶಿಲೆ ಗ್ರಾನೈಟ್ಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೇಡಿಕೆಯಿತ್ತು. ಈ ಉದ್ಯಮದ ಮೂಲಕ ನೂರಾರು ಕಾರ್ಖಾನೆಗಳು ಕಾರ್ಯನಿರ್ವಹಿಸಿ, ಸಾವಿರಾರು ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದವು.
ಆದರೆ ವಿವಿಧ ಕಾರಣಗಳಿಂದ ಅನೇಕ ಗ್ರಾನೈಟ್ ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಅವುಗಳನ್ನು ಅವಲಂಬಿಸಿದ್ದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರಿದೆ.
ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಈ ಉದ್ಯಮಕ್ಕೆ ಮತ್ತೆ ಜೀವ ತುಂಬುವ ಅಗತ್ಯವಿದೆ. ಸ್ಥಗಿತಗೊಂಡಿರುವ ಗ್ರಾನೈಟ್ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಪುನಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಇಳಕಲ್-ಹುನಗುಂದ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂಬುದು ಉದ್ಯಮ ವಲಯದ ನಿರೀಕ್ಷೆಯಾಗಿದೆ.
ನೇಕಾರ ಕ್ಷೇತ್ರಕ್ಕೊಂದು ಕೌಶಲ್ಯಾಧಾರಿತ ಜವಳಿ ಪಾರ್ಕ್ ಅಗತ್ಯ
ಇಳಕಲ್ ಎಂದಾಕ್ಷಣ ನೆನಪಾಗುವುದು ವಿಶ್ವಪ್ರಸಿದ್ಧ ಇಳಕಲ್ ಸೀರೆ. ತನ್ನದೇ ಆದ ವಿಶಿಷ್ಟ ವಿನ್ಯಾಸ, ಬಣ್ಣ ಹಾಗೂ ನೇಯ್ಗೆ ಪರಂಪರೆಯಿಂದ ಇಳಕಲ್ ಸೀರೆ ದೇಶಾದ್ಯಂತ ಗುರುತಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೇಕಾರರು ಮಾರುಕಟ್ಟೆ ಸಮಸ್ಯೆ, ಉತ್ಪಾದನಾ ವೆಚ್ಚ, ವ್ಯಾಪಾರದ ಏರಿಳಿತ ಹಾಗೂ ಸೂಕ್ತ ಮಾರಾಟ ವ್ಯವಸ್ಥೆಯ ಕೊರತೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬ ಅಭಿಪ್ರಾಯವಿದೆ.
ಸಣ್ಣ ಕೈಗಾರಿಕೆ ಸಚಿವರಾಗಿರುವ ವಿಜಯಾನಂದ ಕಾಶಪ್ಪನವರ ಅವರು ಕ್ಷೇತ್ರದಲ್ಲಿರುವ ನೇಕಾರ ಸಮುದಾಯದ ಸಮಸ್ಯೆಗಳತ್ತ ವಿಶೇಷ ಗಮನ ಹರಿಸಬೇಕಿದೆ. ಇಳಕಲ್ ಭಾಗದಲ್ಲಿ ಕೌಶಲ್ಯಾಧಾರಿತ ಜವಳಿ ಪಾರ್ಕ್ ಸ್ಥಾಪನೆಯಾದರೆ ನೇಕಾರರಿಗೆ ಆಧುನಿಕ ತಂತ್ರಜ್ಞಾನ, ತರಬೇತಿ, ವಿನ್ಯಾಸ ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ.
ಜವಳಿ ಪಾರ್ಕ್ ಮೂಲಕ ಇಳಕಲ್ ಸೀರೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಮನ್ನಣೆ ದೊರೆಯುವ ಸಾಧ್ಯತೆಯಿದೆ. ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ನೇಕಾರ ಸಮುದಾಯದ ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ತರಲು ನೆರವಾಗಬಹುದು.
ಮನರಂಜನಾ ರಾಜಕಾರಣಕ್ಕಿಂತ ಅಭಿವೃದ್ಧಿಯೇ ಮುಖ್ಯ
ಹುನಗುಂದ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ವಲಸಿಗರು ಎಂಬ ಚರ್ಚೆಗಿಂತಲೂ ಕುಡಿಯುವ ನೀರು, ಗ್ರಾನೈಟ್ ಉದ್ಯಮದ ಪುನಶ್ಚೇತನ, ನೇಕಾರರ ಸಮಸ್ಯೆ, ಉದ್ಯೋಗ ಸೃಷ್ಟಿ, ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ವಿಚಾರಗಳಿಗೆ ಆದ್ಯತೆ ನೀಡಬೇಕಿದೆ.
ಸಚಿವ ವಿಜಯಾನಂದ ಕಾಶಪ್ಪನವರ ಮತ್ತು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುವ ಬದಲು, ಕ್ಷೇತ್ರದ ಅಭಿವೃದ್ಧಿ ವಿಚಾರಗಳಲ್ಲಿ ರಚನಾತ್ಮಕ ಚರ್ಚೆ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಕುರಿತು ಸ್ಥಳೀಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಸಂಗಮೇಶ ಕುಂಬಾರ ಮಾತನಾಡಿ, ರಾಜಕೀಯ ನಾಯಕರು ವೈಯಕ್ತಿಕ ಟೀಕೆ ಮತ್ತು ಸ್ಥಳೀಯರು-ವಲಸಿಗರು ಎಂಬ ಚರ್ಚೆಗಳಿಗೆ ಸೀಮಿತವಾಗದೆ, ಕ್ಷೇತ್ರದ ಜನರ ಬದುಕಿಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸಬೇಕು. ಸ್ಥಗಿತಗೊಂಡ ಗ್ರಾನೈಟ್ ಕಾರ್ಖಾನೆಗಳ ಪುನಶ್ಚೇತನ, ನೇಕಾರರಿಗಾಗಿ ಕೌಶಲ್ಯಾಧಾರಿತ ಜವಳಿ ಪಾರ್ಕ್ ಸ್ಥಾಪನೆ ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಂತಹ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಇಂತಹ ಕೆಲಸಗಳ ಮೂಲಕವೇ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ ಹುನಗುಂದ ಕ್ಷೇತ್ರದ ಜನರಿಗೆ ಬೇಕಿರುವುದು ಸ್ಥಳೀಯರು-ವಲಸಿಗರು ಎಂಬ ರಾಜಕೀಯ ಸಂಘರ್ಷವಲ್ಲ; ಉದ್ಯೋಗ, ನೀರು, ಕೈಗಾರಿಕೆ, ನೇಕಾರರ ಬದುಕು ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ರಾಜಕಾರಣ. ಈ ನಿರೀಕ್ಷೆಯನ್ನು ಕ್ಷೇತ್ರದ ಇಬ್ಬರು ಪ್ರಮುಖ ನಾಯಕರು ಹೇಗೆ ಈಡೇರಿಸುತ್ತಾರೆ ಎಂಬುದನ್ನು ಜನತೆ ಕಾದು ನೋಡುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande