ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರದಿಂದ ಮತ್ತೆ ಕೇಂದ್ರಕ್ಕೆ ಶಿಫಾರಸು
ಬೆಂಗಳೂರು, 21 ನವೆಂಬರ್ (ಹಿ.ಸ.): ಕಾಡುಗೊಲ್ಲ (ಅಡವಿಗೊಲ್ಲ) ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬೆಂಬಲ ನೀಡಿದೆ. ಈ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಐದು ಬಾರಿ ತಿರಸ್
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರದಿಂದ ಮತ್ತೆ ಕೇಂದ್ರಕ್ಕೆ ಶಿಫಾರಸು


ಬೆಂಗಳೂರು, 21 ನವೆಂಬರ್ (ಹಿ.ಸ.):

ಕಾಡುಗೊಲ್ಲ (ಅಡವಿಗೊಲ್ಲ) ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬೆಂಬಲ ನೀಡಿದೆ. ಈ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಐದು ಬಾರಿ ತಿರಸ್ಕರಿಸಿದ್ದರೂ, ಬೇಡಿಕೆಯನ್ನು ಕೈಬಿಡದ ರಾಜ್ಯ ಸರ್ಕಾರ ಇದೀಗ ಹೊಸದಾಗಿ ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ನಿರ್ಧರಿಸಿದೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಕಾರ್ಯಾಲಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 19ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ವರದಿಗಳನ್ನೇ ಪುನರಾವರ್ತಿಸುವ ಬದಲು, ಕೇಂದ್ರ ಸರ್ಕಾರ ವ್ಯಕ್ತಪಡಿಸಿರುವ ಆಕ್ಷೇಪಣೆಗಳಿಗೆ ಸೂಕ್ತ ಉತ್ತರ ನೀಡುವ ರೀತಿಯಲ್ಲಿ ಹೊಸ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಮುಂದಾಗಿದೆ.

ಮೂರು ತಿಂಗಳಲ್ಲಿ ಹೊಸ ಅಧ್ಯಯನ ವರದಿ

ಕಾಡುಗೊಲ್ಲ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಬುಡಕಟ್ಟು ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹೊಸ ವರದಿ ಸಿದ್ಧಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಇದಕ್ಕಾಗಿ ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ (ಸಿಎಂಡಿಆರ್) ತಜ್ಞ ಮಾನವಶಾಸ್ತ್ರಜ್ಞರ ನೆರವು ಪಡೆಯಲು ನಿರ್ಧರಿಸಲಾಗಿದೆ.

ಈ ಸಂಬಂಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನವೆಂಬರ್ 18ರಂದೇ ಆದೇಶ ಹೊರಡಿಸಿದೆ. ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಲಾಗಿದೆ.

ಹೊಸ ಅಧ್ಯಯನದಲ್ಲಿ ಸಮುದಾಯದ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಸ್ಥಿತಿ, ಸಾಂಪ್ರದಾಯಿಕ ಆಚರಣೆಗಳು, ವಾಸಸ್ಥಳ ಮತ್ತು ಬುಡಕಟ್ಟು ಲಕ್ಷಣಗಳನ್ನು ದಾಖಲಿಸಿ, ಕೇಂದ್ರ ಸರ್ಕಾರದ ಪರಿಶೀಲನೆಗೆ ಅಗತ್ಯವಿರುವ ಸಮಗ್ರ ದಾಖಲೆಗಳನ್ನು ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ.

2015ರಿಂದ ಐದು ಬಾರಿ ಪ್ರಸ್ತಾವನೆ; ಕೇಂದ್ರದಿಂದ ತಿರಸ್ಕಾರ

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ 2015ರಿಂದ ನಿರಂತರ ಪ್ರಯತ್ನ ನಡೆಸುತ್ತಿದೆ. 2015ರ ಮಾರ್ಚ್ 18ರಂದು ಮೊದಲ ಬಾರಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ವರ್ಷ ಆಗಸ್ಟ್ 17ರಂದು ಮತ್ತೊಂದು ಪ್ರಸ್ತಾವನೆಯನ್ನೂ ಕಳುಹಿಸಲಾಗಿತ್ತು.

ನಂತರ 2018ರ ಸೆಪ್ಟೆಂಬರ್ 28, 2021ರ ಅಕ್ಟೋಬರ್ 12, 2022ರ ಫೆಬ್ರವರಿ 4, 2023ರ ಜೂನ್ 5 ಹಾಗೂ 2025ರ ಏಪ್ರಿಲ್ 3ರಂದು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು.

ಆದರೆ, ಭಾರತದ ಮಹಾ ನೋಂದಣಾಧಿಕಾರಿ ಕಚೇರಿಯು ಪ್ರಸ್ತಾವನೆಗಳನ್ನು ಪರಿಶೀಲಿಸಿ ಐದು ಸಂದರ್ಭಗಳಲ್ಲಿ ಶಿಫಾರಸು ಮಾಡಲು ನಿರಾಕರಿಸಿತ್ತು. 2017ರ ಫೆಬ್ರವರಿ 6, 2019ರ ಫೆಬ್ರವರಿ 18, 2022ರ ಸೆಪ್ಟೆಂಬರ್ 22, 2024ರ ಮಾರ್ಚ್ 27 ಮತ್ತು 2026ರ ಜೂನ್ 15ರಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತ್ತು.

ಹಿಂದೆ ಸಲ್ಲಿಸಿದ ಪ್ರಸ್ತಾವನೆಗಳಲ್ಲಿ ಹೊಸ ಮಾಹಿತಿ ಅಥವಾ ಹೆಚ್ಚುವರಿ ಸಾಕ್ಷ್ಯಾಧಾರಗಳಿಲ್ಲ ಎಂಬುದು ಕೇಂದ್ರದ ಪ್ರಮುಖ ಆಕ್ಷೇಪಣೆಯಾಗಿತ್ತು. 2022ರ ಸೆಪ್ಟೆಂಬರ್ 14ರಂದು ಪರಿಷ್ಕರಿಸಲಾದ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ಭಾರತದ ಮಹಾ ನೋಂದಣಾಧಿಕಾರಿಯ ಒಪ್ಪಿಗೆ ಇಲ್ಲದೆ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಹೊಸ ಸಮುದಾಯವನ್ನು ಸೇರಿಸುವ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ 2026ರ ಜುಲೈ 22ರಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಜ್ಯದ ಪ್ರಸ್ತಾವನೆಯನ್ನು ಅಧಿಕೃತವಾಗಿ ತಿರಸ್ಕರಿಸಿತ್ತು.

ಸೋಮಣ್ಣ ಪತ್ರದ ಬಳಿಕ ಮತ್ತೆ ಚುರುಕಾದ ಪ್ರಕ್ರಿಯೆ

ಐದನೇ ಬಾರಿಯೂ ಪ್ರಸ್ತಾವನೆ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಅಕ್ಟೋಬರ್ 7 ಮತ್ತು ಅಕ್ಟೋಬರ್ 30ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಹಿಂದಿನ ಪ್ರಸ್ತಾವನೆಗಳಲ್ಲಿದ್ದ ಮಾಹಿತಿಯನ್ನೇ ಮತ್ತೆ ಮತ್ತೆ ಸಲ್ಲಿಸಿರುವುದರಿಂದ ಕೇಂದ್ರ ಮಟ್ಟದಲ್ಲಿ ಅನುಮೋದನೆ ದೊರೆತಿಲ್ಲ ಎಂದು ಗಮನ ಸೆಳೆದಿದ್ದರು.

ಹಳೆಯ ದಾಖಲೆಗಳನ್ನು ಪುನಃ ಸಲ್ಲಿಸುವ ಬದಲು ತಜ್ಞರ ಸಮಿತಿ ರಚಿಸಿ, ಕೇಂದ್ರ ಸರ್ಕಾರದ ಪರಿಷ್ಕೃತ ಮಾನದಂಡಗಳಿಗೆ ಅನುಗುಣವಾಗಿ ಹೊಸ ಮತ್ತು ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಎಂ. ಅವರು ಅಕ್ಟೋಬರ್ 31ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲರ ಸಾಮಾಜಿಕ ಸ್ಥಿತಿಗತಿ ಹಾಗೂ ಅವರ ಬಹುದಿನಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರು.

12 ಜಿಲ್ಲೆ, 40 ತಾಲ್ಲೂಕುಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರು

ರಾಜ್ಯದ 12 ಜಿಲ್ಲೆಗಳ 40 ತಾಲ್ಲೂಕುಗಳ ವ್ಯಾಪ್ತಿಯ 1,273 ಹಟ್ಟಿಗಳಲ್ಲಿ ಆರು ಲಕ್ಷಕ್ಕೂ ಅಧಿಕ ಕಾಡುಗೊಲ್ಲರು ವಾಸಿಸುತ್ತಿದ್ದಾರೆ ಎಂದು ಅಭಿವೃದ್ಧಿ ನಿಗಮದ ಅಧ್ಯಕ್ಷರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಮುದಾಯದ ಅನೇಕ ಕುಟುಂಬಗಳು ಮುಖ್ಯ ಜನವಸತಿ ಪ್ರದೇಶಗಳಿಂದ ಸುಮಾರು 3ರಿಂದ 4 ಕಿಲೋಮೀಟರ್ ದೂರದಲ್ಲಿ ಅರಣ್ಯದಂಚಿನ ಪ್ರದೇಶಗಳಲ್ಲಿ ವಾಸಿಸುತ್ತಿವೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಜೀವನ ನಡೆಸುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸಮುದಾಯದ ವಿಶಿಷ್ಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಗಣಿಸಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸು ಸಲ್ಲಿಸಬೇಕು ಎಂದು ಮನವಿ ಮಾಡಲಾಗಿತ್ತು.

ಹೊಸ ದಾಖಲೆಗಳೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ

ಹಿಂದಿನ ಐದು ಪ್ರಯತ್ನಗಳಲ್ಲಿ ಎದುರಾದ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಬಾರಿ ಹೊಸ ರೀತಿಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ಮುಂದಾಗಿದೆ. ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ಮೂಲಕ ನಡೆಯಲಿರುವ ಅಧ್ಯಯನವು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಮೂರು ತಿಂಗಳೊಳಗೆ ಸಮಗ್ರ ವರದಿ ಸಿದ್ಧಪಡಿಸಿ, ಅಗತ್ಯ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಸಲ್ಲಿಸುವುದು ಸರ್ಕಾರದ ಮುಂದಿನ ಗುರಿಯಾಗಿದೆ.

ಕಾಡುಗೊಲ್ಲ ಸಮುದಾಯದ ಬಹುದಿನಗಳ ಬೇಡಿಕೆಗೆ ಮತ್ತೊಮ್ಮೆ ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲ ದೊರೆತಿರುವುದು ಈ ನಿರ್ಧಾರದ ಪ್ರಮುಖ ಅಂಶವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande