
ಬೆಂಗಳೂರು, 21 ನವೆಂಬರ್ (ಹಿ.ಸ.):
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಪ್ರಸ್ತಾಪವಾಗಿರುವುದು ರಾಜ್ಯದ ಆಡಳಿತ ಮತ್ತು ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಚಂದ್ರಕಾಂತ್ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹುದ್ದೆ ಕೊಡಿಸುವ ಉದ್ದೇಶದಿಂದ 2 ಕೋಟಿ ರೂ. ಹಣ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ವೇಳೆ ಪ್ರಕರಣದ ಮಧ್ಯವರ್ತಿ ಬಸವರಾಜ್ ಕನ್ನಾಳೆ ನೀಡಿರುವ ಹೇಳಿಕೆಯಲ್ಲಿ ಈ ವಿಚಾರ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಸವರಾಜ್ ಕನ್ನಾಳೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಅಧಿಕಾರಿಗಳ ವಿಚಾರಣೆ ವೇಳೆ ಈ ಕುರಿತು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸೂಚನೆಯಂತೆ ಪೊಲೀಸ್ ಅಧಿಕಾರಿಯ ನಿವಾಸಕ್ಕೆ ತೆರಳಿ 2 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದಾಗಿ ಕನ್ನಾಳೆ ಹೇಳಿರುವುದಾಗಿ ವರದಿಯಾಗಿದೆ.
ಈ ಹಣವನ್ನು ಕೆಎಎಸ್ ಸಂದರ್ಶನದಲ್ಲಿ ಇಬ್ಬರು ಪುತ್ರಿಯರಿಗೆ ಅನುಕೂಲವಾಗುವಂತೆ ಅಂಕಗಳನ್ನು ಕೊಡಿಸುವ ಉದ್ದೇಶದಿಂದ ನೀಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಇದಲ್ಲದೆ, ಇಬ್ಬರು ಪುತ್ರಿಯರಲ್ಲಿ ಒಬ್ಬರು ಸಂದರ್ಶನಕ್ಕೆ ಅರ್ಹತೆ ಪಡೆದಿರದಿದ್ದರೂ ಆಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಣದ ವ್ಯವಹಾರ ನಡೆದಿತ್ತು ಎಂದು ಕನ್ನಾಳೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷರಿಗೂ ಹಣ ತಲುಪಿತ್ತೇ?
ಪೊಲೀಸ್ ಅಧಿಕಾರಿಯ ನಿವಾಸದಿಂದ ಪಡೆದಿದ್ದ 2 ಕೋಟಿ ರೂ. ಹಣವನ್ನು ಕೆಪಿಎಸ್ಸಿ ಅಂದಿನ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ತಲುಪಿಸಿದ್ದಾಗಿ ಕನ್ನಾಳೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಸಂಬಂಧಪಟ್ಟ ಕೆಎಎಸ್ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಪ್ರಾಥಮಿಕ ಪರಿಶೀಲನೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಸಂದರ್ಶನದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳ ವಿವರ, ಸಂದರ್ಶನ ಮಂಡಳಿಯ ಸದಸ್ಯರು, ಅಭ್ಯರ್ಥಿಗಳಿಗೆ ನೀಡಲಾದ ಅಂಕಗಳು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ
ಈಗಾಗಲೇ ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಕೀ ಹಂಚಿಕೆ ಹಾಗೂ ಅಭ್ಯರ್ಥಿಗಳಿಂದ ಲಂಚ ಪಡೆದ ಆರೋಪಗಳು ಕೇಳಿಬಂದಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಿದೆ.
ಇದೀಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೆಸರೂ ಆರೋಪದ ರೂಪದಲ್ಲಿ ಪ್ರಸ್ತಾಪವಾಗಿರುವುದು ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಆದರೆ, 2 ಕೋಟಿ ರೂ. ಹಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಅಥವಾ ಇತರರ ವಿರುದ್ಧ ಈ ನಿರ್ದಿಷ್ಟ ಆರೋಪದಲ್ಲಿ ಇನ್ನೂ ದೋಷಾರೋಪಣೆ ದೃಢಪಟ್ಟಿಲ್ಲ. ಮಧ್ಯವರ್ತಿಯ ಹೇಳಿಕೆಯ ಸತ್ಯಾಸತ್ಯತೆಯನ್ನು ತನಿಖೆಯಿಂದಲೇ ಖಚಿತಪಡಿಸಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R