
ಬಾಗಲಕೋಟೆ, 21 ನವೆಂಬರ್ (ಹಿ.ಸ.)
ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಶೆಡ್ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಆಶ್ರಯಿಸಿಕೊಂಡು ಜೀವನ ಸಾಗಿಸುತ್ತಿರುವ ಹತ್ತಾರು ಬಡ ಕುಟುಂಬಗಳಲ್ಲಿ ಆತಂಕ ಮನೆಮಾಡಿದೆ.
ಕಳೆದ ಹಲವು ವರ್ಷಗಳಿಂದ ಸಣ್ಣಪುಟ್ಟ ವ್ಯಾಪಾರ ಹಾಗೂ ಇನ್ನಿತರ ವೃತ್ತಿಗಳನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಬಡ ಕುಟುಂಬಗಳು ಈ ಶೆಡ್ಗಳನ್ನೇ ತಮ್ಮ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿವೆ. ಇದೀಗ ಅಧಿಕಾರಿಗಳು ಅಕ್ರಮವಾಗಿ ನಿರ್ಮಿಸಿರುವ ಶೆಡ್ಗಳನ್ನು ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿರುವುದರಿಂದ, ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂಬ ಭೀತಿ ಕಾಡುತ್ತಿದೆ.
ಶೆಡ್ ತೆರವಾದರೆ ಬದುಕು ಸಾಗಿಸುವುದಾದರೂ ಹೇಗೆ?
ತೊದಲಬಾಗಿಯಲ್ಲಿ ಹತ್ತಾರು ಬಡ ಕುಟುಂಬಗಳು ಈ ಶೇಡ್ ಗಳಲ್ಲೇ ಜೀವನ ಸಾಗಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬಗಳಿಗೆ ಶೆಡ್ಗಳೇ ಬದುಕಿಗೆ ನೆಲೆಯಾಗಿವೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಶೆಡ್ಗಳನ್ನು ತೆರವುಗೊಳಿಸಿದರೆ ತಮ್ಮ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಲಿದೆ ಎಂಬುದು ಅವರ ಅಳಲಾಗಿದೆ.
ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿರುವುದನ್ನು ವಿರೋಧಿಸುವುದಕ್ಕಿಂತಲೂ, ತೆರವುಗೊಳಿಸುವ ಮೊದಲು ತಮ್ಮ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಬಡ ಕುಟುಂಬಗಳ ಪ್ರಮುಖ ಬೇಡಿಕೆಯಾಗಿದೆ.
ಅಭಿವೃದ್ಧಿಯ ಜೊತೆಗೆ ಬಡವರ ಬದುಕಿಗೂ ಭದ್ರತೆ ನೀಡಿ
ಈ ಕುರಿತು ಮನವಿ ಮಾಡಿರುವ ಬಡ ಮಾದಪ್ಪ ಅವರು, ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಹಲವು ವರ್ಷಗಳಿಂದ ಶೇಡ್ ಗಳಲ್ಲಿ ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಬದುಕಿನ ಬಗ್ಗೆಯೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಶೆಡ್ಗಳನ್ನು ತೆರವುಗೊಳಿಸುವುದರಿಂದ ನಮ್ಮ ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗಲಿದೆ. ಏಕಾಏಕಿ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ಜೀವನ ಎಲ್ಲಿ ಮುಂದುವರಿಸಬೇಕು? ಕುಟುಂಬಗಳ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ. ಆದ್ದರಿಂದ ಅಧಿಕಾರಿಗಳು ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ಪರಿಶೀಲಿಸಿ, ಶೆಡ್ಗಳನ್ನು ತೆರವುಗೊಳಿಸುವ ಮುನ್ನ ಪರ್ಯಾಯ ಸ್ಥಳ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಮಾನವೀಯತೆ ಮೆರೆಯಲಿ
ಸರ್ಕಾರದ ನಿಯಮಗಳು ಮತ್ತು ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳು ಮುಖ್ಯವಾದರೂ, ಅವುಗಳ ಅನುಷ್ಠಾನದ ಸಂದರ್ಭದಲ್ಲಿ ಬಡ ಹಾಗೂ ದುರ್ಬಲ ವರ್ಗದ ಜನರ ಜೀವನೋಪಾಯಕ್ಕೂ ಆದ್ಯತೆ ನೀಡಬೇಕಿದೆ. ಅಕ್ರಮ ನಿರ್ಮಾಣಗಳ ತೆರವು ಅನಿವಾರ್ಯವಾಗಿದ್ದರೆ, ಸಂಬಂಧಪಟ್ಟ ಕುಟುಂಬಗಳ ಅಹವಾಲು ಆಲಿಸಿ, ನಿಯಮಾನುಸಾರ ಸಾಧ್ಯವಿರುವ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣ, ರಸ್ತೆ ಮತ್ತು ಮೂಲಸೌಕರ್ಯಗಳ ವಿಸ್ತರಣೆ ಮಾತ್ರವಲ್ಲ. ಅದರ ಜೊತೆಗೆ ಸಾಮಾನ್ಯ ಜನರ ಬದುಕು ಸುಧಾರಿಸುವುದೂ ಆಗಿದೆ. ಬಡವರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ತೊದಲಬಾಗಿಯ ಬಡ ಕುಟುಂಬಗಳ ಮನವಿಗೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ? ಶೆಡ್ ತೆರವಿಗೂ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಬಡವರ ಬದುಕು ಉಳಿಸಿ, ಅಭಿವೃದ್ಧಿಯನ್ನೂ ಮುಂದುವರಿಸಿ ಎಂಬುದೇ ತೊದಲಬಾಗಿಯ ಬಡ ಕುಟುಂಬಗಳ ಒಕ್ಕೊರಲ ಮನವಿಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande