ಬಳ್ಳಾರಿ ಜಿಲ್ಲೆ: ಕುಸಿಯುತ್ತಿರುವ ಅಂತರ್ಜಲ; ನೀರಿನ ಮಿತಬಳಕೆಗೆ ಜಿಲ್ಲಾಧಿಕಾರಿ ಮನವಿ
ಬಳ್ಳಾರಿ, 21 ನವೆಂಬರ್ (ಹಿ.ಸ.) ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟದಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಕುಡಿಯುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮನವಿ ಮಾಡಿದ್ದಾರೆ. ಕಳೆದ ವರ್ಷದ (ಅಕ್ಟೋ
Groundwater is declining


ಬಳ್ಳಾರಿ, 21 ನವೆಂಬರ್ (ಹಿ.ಸ.)

ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟದಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಕುಡಿಯುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮನವಿ ಮಾಡಿದ್ದಾರೆ.

ಕಳೆದ ವರ್ಷದ (ಅಕ್ಟೋಬರ್ 2025) ಅಂಕಿಅಂಶಗಳಿಗೆ ಹೋಲಿಸಿದರೆ, ಪ್ರಸಕ್ತ ವರ್ಷದ ಅಕ್ಟೋಬರ್ ವೇಳೆಗೆ ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.

ಸಂಡೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 6.52 ಮೀಟರ್ ನಷ್ಟು ಅಂತರ್ಜಲ ಇಳಿಕೆಯಾಗಿದ್ದು, ನೀರಿನ ಮಟ್ಟ 5.35 ಮೀಟರ್ ನಿಂದ 11.87 ಮೀಟರ್ ಗೆ ಕುಸಿದಿದೆ. ಉಳಿದಂತೆ ಬಳ್ಳಾರಿಯಲ್ಲಿ 1.83 ಮೀಟರ್ (5.73 ಮೀ.), ಕಂಪ್ಲಿಯಲ್ಲಿ 1.57 ಮೀಟರ್ (4.21 ಮೀ.), ಸಿರುಗುಪ್ಪದಲ್ಲಿ 1.17 ಮೀಟರ್ (3.15 ಮೀ.) ಹಾಗೂ ಕುರುಗೋಡು ತಾಲೂಕಿನಲ್ಲಿ 0.97 ಮೀಟರ್ (8.10 ಮೀ.) ನಷ್ಟು ಅಂತರ್ಜಲ ಕುಸಿತ ದಾಖಲಾಗಿದೆ.

*ಗ್ರಾಮೀಣ ಕೆರೆಗಳು ಹಾಗೂ ಬೋರ್ ವೆಲ್ ಸ್ಥಿತಿಗತಿ:*

ನವೆಂಬರ್ 18ರ ವರೆಗಿನ ವರದಿಯಂತೆ ಬಳ್ಳಾರಿ, ಕುರುಗೋಡು, ಸಿರುಗುಪ್ಪ ಮತ್ತು ಕಂಪ್ಲಿ ತಾಲೂಕುಗಳ ವ್ಯಾಪ್ತಿಯಲ್ಲಿರುವ ಒಟ್ಟು 66 ಗ್ರಾಮೀಣ ಕುಡಿಯುವ ನೀರಿನ ಕೆರೆಗಳ ಪೈಕಿ 33 ಕೆರೆಗಳು ಶೇ. 91 ರಿಂದ 100 ರಷ್ಟು ಭರ್ತಿಯಾಗಿವೆ. 19 ಕೆರೆಗಳಲ್ಲಿ ಶೇ. 76 ರಿಂದ 90 ರಷ್ಟು ನೀರಿದ್ದು, 5 ಕೆರೆಗಳು ಶೇ. 51 ರಿಂದ 75 ರಷ್ಟು ತುಂಬಿವೆ. ಬಳ್ಳಾರಿ ತಾಲೂಕಿನ ಒಂದು ಕೆರೆಯಲ್ಲಿ ಮಾತ್ರ ನೀರಿನ ಸಂಗ್ರಹ ಶೇ. 25 ಕ್ಕಿಂತ ಕಡಿಮೆಯಿದ್ದು, ಉಳಿದ 8 ಕಡೆಗಳಲ್ಲಿ ನದಿಯಿಂದ ನೇರವಾಗಿ ನೀರು ಪಂಪ್ ಮಾಡಲಾಗುತ್ತಿದೆ.

ಇನ್ನು ಅಂತರ್ಜಲ ಕುಸಿತ ಹೆಚ್ಚಿರುವ ಸಂಡೂರು ತಾಲೂಕಿನ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 7 ಗ್ರಾಮಗಳಲ್ಲಿ (ಚೋರನೂರು-2, ಹೊಸ ಜೋಗಿಕಲ್ಲು, ಹೆಚ್.ಕೆ.ಹಳ್ಳಿ, ಬಂಡ್ರಿ, ಸಿ.ಲಕ್ಕಲಹಳ್ಳಿ, ಹುಲಿಕುಂಟೆ ಹಾಗೂ ಎಸ್.ಒಬಳಾಪುರ ತಲಾ-1) ಒಟ್ಟು 8 ಖಾಸಗಿ ಬೋರ್ ವೆಲ್ ಗಳ ಮೂಲಕ ನೀರಿನ ವ್ಯವಸ್ಥೆ ಗುರುತಿಸಲಾಗಿದೆ.

*ನಗರ ಸ್ಥಳೀಯ ಸಂಸ್ಥೆಗಳ ನೀರು ಪೂರೈಕೆ ವಿವರ:*

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಂಗ್ರಹ ತೃಪ್ತಿಕರವಾಗಿದ್ದು, ಮುಂದಿನ 2 ರಿಂದ 6 ತಿಂಗಳವರೆಗೆ ಪೂರೈಸುವಷ್ಟು ನೀರು ಲಭ್ಯವಿದೆ.

ಬಳ್ಳಾರಿ ಮಹಾನಗರ ಪಾಲಿಕೆ: ಅಲ್ಲೀಪುರ (ಶೇ. 93.36) ಮತ್ತು ಮೋಕಾದ ಮೂರು ಜಲಸಂಗ್ರಹಾಗಾರಗಳಲ್ಲಿ (ಶೇ. 89 ರಿಂದ 97 ರಷ್ಟು) ನೀರು ಸಂಗ್ರಹವಿದ್ದು, ಮುಂದಿನ 70 ದಿನಗಳವರೆಗೆ 7 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಸಿದ್ಧತೆ ಇದೆ.

ಸಂಡೂರು ಪುರಸಭೆ: ನಾರಿಹಳ್ಳ ಜಲಾಶಯದಲ್ಲಿ 13,167.33 ಎಂ.ಎಲ್ ನೀರು ಲಭ್ಯವಿದ್ದು, 6 ತಿಂಗಳವರೆಗೆ ನೀರು ಪೂರೈಸಬಹುದಾಗಿದೆ.

ಇತರೆ ಪುರಸಭೆ/ಪ.ಪಂ: ಕುರುಗೋಡು (ಶೇ. 100 ಭರ್ತಿ-4 ದಿನಕ್ಕೊಮ್ಮೆ), ತೆಕ್ಕಲಕೋಟೆ (ಶೇ. 97 ಭರ್ತಿ-6 ದಿನಕ್ಕೊಮ್ಮೆ) ಹಾಗೂ ಕಂಪ್ಲಿಯಲ್ಲಿ (ನೇರ ಪಂಪಿ0ಗ್-2 ದಿನಕ್ಕೊಮ್ಮೆ) ಮುಂದಿನ 3 ತಿಂಗಳವರೆಗೆ ನೀರಿಗೆ ತೊಂದರೆಯಿಲ್ಲ. ಸಿರುಗುಪ್ಪ ನಗರಸಭೆಯಲ್ಲಿ (ಶೇ. 52 ಭರ್ತಿ ಹಾಗೂ ನದಿ ಪಂಪಿ0ಗ್) 3.5 ತಿಂಗಳಿಗೆ ಆಗುವಷ್ಟು ನೀರಿದ್ದು, 8 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಕುಡತಿನಿಯಲ್ಲಿ (ಶೇ. 78.57 ಭರ್ತಿ) 2 ತಿಂಗಳವರೆಗೆ 6 ದಿನಕ್ಕೊಮ್ಮೆ ಹಾಗೂ ಕುರೇಕುಪ್ಪದಲ್ಲಿ ಬೋರ್ ವೆಲ್ ಮೂಲಕ ಪ್ರತಿದಿನ ನೀರು ನೀಡಲಾಗುತ್ತಿದೆ.

*ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳ ಕಿವಿಮಾತು:*

ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿ ಮತ್ತು ನೀರಿನ ಅಭಾವವನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ‘ನೀರಿದ್ದರೆ ಜಗತ್ತು, ನೀರುಳಿಸಿದರೆ ನಮ್ಮ ಭವಿಷ್ಯ’ ಎಂಬ0ತೆ, ಸಾರ್ವಜನಿಕರು ಈ ಕೆಳಗಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ವ್ಯರ್ಥ ತಡೆಗಟ್ಟಿ: ಹಲ್ಲುಜ್ಜುವಾಗ, ಪಾತ್ರೆ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬೇಡಿ ಮತ್ತು ಮನೆಯ ಪೈಪ್ ಗಳ ಸೋರಿಕೆಯನ್ನು ತಕ್ಷಣ ದುರಸ್ತಿಗೊಳಿಸಿ.

ಮರುಬಳಕೆ ಹಾಗೂ ಮಿತಬಳಕೆ: ತರಕಾರಿ, ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಬಳಸಿ. ವಾಹನ ತೊಳೆಯಲು ಮತ್ತು ಅಂಗಳಕ್ಕೆ ಹಾಕಲು ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣ ನಿಲ್ಲಿಸಿ.

ಸಂಗ್ರಹಣೆ ಮತ್ತು ಜಾಗೃತಿ: ನೀರು ಬರುವ ಸಮಯದಲ್ಲಿ ಶುದ್ಧ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿ ಮುಚ್ಚಿಡಿ. ಸಾರ್ವಜನಿಕ ನಲ್ಲಿಗಳಲ್ಲಿ ನೀರು ಪೋಲಾಗುತ್ತಿದ್ದರೆ ತಕ್ಷಣ ಬಂದ್ ಮಾಡಿ ಅಥವಾ ಅಧಿಕಾರಿಗಳ ಗಮನಕ್ಕೆ ತನ್ನಿ. ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಗೆ ಸಹಕರಿಸಿ ಎಂದು ಅವರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande