ಮಳೆ ಕೊರತೆಯಿಂದ ಒಣಗಿದ ಶೇಂಗಾ ಬೆಳೆ:ಕಂಗಾಲಾದ ರೈತ
ಗದಗ, 21 ನವೆಂಬರ್ (ಹಿ.ಸ.) ಮಳೆಯ ಅಭಾವದಿಂದ ಶೇಂಗಾ ಬೆಳೆ ಒಣಗಿ ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ನಿರೀಕ್ಷೆಯಿಂದ ಕಾಯುತ್ತಿದ್ದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ
ಫೋಟೋ


ಗದಗ, 21 ನವೆಂಬರ್ (ಹಿ.ಸ.)

ಮಳೆಯ ಅಭಾವದಿಂದ ಶೇಂಗಾ ಬೆಳೆ ಒಣಗಿ ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ನಿರೀಕ್ಷೆಯಿಂದ ಕಾಯುತ್ತಿದ್ದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ರೈತ ವೆಂಕಟೇಶ ಸಂಗಟಿ ಅವರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದಿದ್ದರು. ಬೆಳೆ ಬೆಳೆಯಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗುವ ಹಂತ ತಲುಪಿದೆ. ಅಲ್ಲದೆ, ಗಿಡಗಳಲ್ಲಿ ಶೇಂಗಾ ಕಾಯಿಗಳೂ ಸರಿಯಾಗಿ ಆಗದಿರುವುದು ರೈತನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಹಾಳಾಗುತ್ತಿರುವುದನ್ನು ಕಂಡು ರೈತ ವೆಂಕಟೇಶ ಸಂಗಟಿ ಅವರು ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ಕೃಷಿಗಾಗಿ ಮಾಡಿದ ಖರ್ಚು ಕೂಡ ಮರಳಿ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ರಾಮೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಶೇಂಗಾ ಬೆಳೆಯನ್ನು ಪರಿಶೀಲಿಸಬೇಕು. ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ವೆಂಕಟೇಶ ಸಂಗಟಿ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande