ಆನೆ ಪಾರ್ಕ್ ಪುನರಾರಂಭಕ್ಕೆ ಕ್ರೆಡಿಟ್ ವಾರ್
ಬೆಂಗಳೂರು, 21 ನವೆಂಬರ್ (ಹಿ.ಸ.): ಮಲ್ಲೇಶ್ವರದಲ್ಲಿರುವ ಆನೆ ಪಾರ್ಕ್ ಸಾರ್ವಜನಿಕರ ಬಳಕೆಗೆ ಮತ್ತೆ ಮುಕ್ತವಾಗಿರುವ ಬೆನ್ನಲ್ಲೇ, ಅದರ ಅಭಿವೃದ್ಧಿ ಮತ್ತು ಪುನರಾರಂಭದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಪಾರ್ಕ್ನ ಪುನರಾರಂಭದ ವಿಚಾರ ಇದೀಗ ರಾಜಕೀಯ ವಾ
BJP-Vs-Congress-Malleshwaram-Aane-Park-Credit-War


ಬೆಂಗಳೂರು, 21 ನವೆಂಬರ್ (ಹಿ.ಸ.):

ಮಲ್ಲೇಶ್ವರದಲ್ಲಿರುವ ಆನೆ ಪಾರ್ಕ್ ಸಾರ್ವಜನಿಕರ ಬಳಕೆಗೆ ಮತ್ತೆ ಮುಕ್ತವಾಗಿರುವ ಬೆನ್ನಲ್ಲೇ, ಅದರ ಅಭಿವೃದ್ಧಿ ಮತ್ತು ಪುನರಾರಂಭದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.

ಪಾರ್ಕ್ನ ಪುನರಾರಂಭದ ವಿಚಾರ ಇದೀಗ ರಾಜಕೀಯ ವಾಗ್ವಾದಕ್ಕೆ ವೇದಿಕೆಯಾಗಿದೆ.ಆನೆ ಪಾರ್ಕ್ ಪುನಶ್ಚೇತನಕ್ಕೆ ಸ್ಥಳೀಯ ನಿವಾಸಿಗಳು, ಸ್ವಯಂಸೇವಕರು ಹಾಗೂ ಜಿಬಿಎ ಅಧಿಕಾರಿಗಳು ಕೈಜೋಡಿಸಿದ್ದರು.

ಸುಮಾರು ಎರಡು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಉದ್ಯಾನವನ್ನು ಸ್ವಚ್ಛಗೊಳಿಸಿ ಮತ್ತೆ ಬಳಕೆಗೆ ಸಿದ್ಧಪಡಿಸುವ ಕಾರ್ಯದಲ್ಲಿ ನಿವಾಸಿಗಳು ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರ್ಯಕ್ಕಾಗಿ ಸ್ಥಳೀಯರು ಹಣ ಸಂಗ್ರಹಿಸಿ ಸಹಕರಿಸಿದ್ದರು.

ಫ್ಲೆಕ್ಸ್ ಅಳವಡಿಕೆ ಬಳಿಕ ವಿವಾದಪಾರ್ಕ್ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವುದಾಗಿ ಸ್ಥಳೀಯ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಫ್ಲೆಕ್ಸ್ ವಿರುದ್ಧ ಘೋಷಣೆ ಕೂಗಿ, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಅಭಿವೃದ್ಧಿ ಕಾರ್ಯದ ಕ್ರೆಡಿಟ್ ಯಾರಿಗೆ?ಆನೆ ಪಾರ್ಕ್ ಪುನರಾರಂಭಕ್ಕೆ ತಮ್ಮ ಶಾಸಕರ ಮುತುವರ್ಜಿಯೇ ಕಾರಣ ಎಂದು ಬಿಜೆಪಿ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ದಶಕಗಳಿಂದ ಮುಚ್ಚಿದ್ದ ಉದ್ಯಾನವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವಲ್ಲಿ ಶಾಸಕರ ಪಾತ್ರವಿದೆ ಎಂಬುದು ಅವರ ವಾದ.

ಇನ್ನೊಂದೆಡೆ, ಉದ್ಯಾನದ ಪುನಶ್ಚೇತನ ಕಾರ್ಯವನ್ನು ಸ್ಥಳೀಯ ನಿವಾಸಿಗಳೇ ಯೋಜಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಕೈಗೊಂಡಿದ್ದಾರೆ. ಹೀಗಿರುವಾಗ ರಾಜಕೀಯ ನಾಯಕರು ಅಭಿವೃದ್ಧಿ ಕಾರ್ಯದ ಶ್ರೇಯಸ್ಸು ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂಬ ಆಕ್ಷೇಪ ಸ್ಥಳೀಯರಿಂದ ವ್ಯಕ್ತವಾಗಿದೆ.

ನಿವಾಸಿ ಪ್ರೀತಿ ಸುಂದರಾಜನ್ ಕೂಡ, ಜನರೇ ಹಣ ಸಂಗ್ರಹಿಸಿ, ಜಿಬಿಎ ಮತ್ತು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನೆ ಪಾರ್ಕ್ ವಿಚಾರ ಈಗ ರಾಜಕೀಯ ಅಸ್ತ್ರ!ಒಂದು ಕಡೆ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರ ಬೆಂಬಲಕ್ಕೆ ಬಿಜೆಪಿ ಕಾರ್ಯಕರ್ತರು ನಿಂತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಾಗೂ ಫ್ಲೆಕ್ಸ್ ವಿವಾದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಬೆಂಗಳೂರಿನ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಆಡಳಿತ ವೈಫಲ್ಯದ ಆರೋಪಗಳ ನಡುವೆಯೇ ಈ ಬೆಳವಣಿಗೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.ಒಟ್ಟಿನಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ ಪುನಶ್ಚೇತನಗೊಂಡ ಆನೆ ಪಾರ್ಕ್ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ರಾಜಕೀಯ ಪಕ್ಷಗಳ ನಡುವಿನ ಈ ಕ್ರೆಡಿಟ್ ವಾರ್ನಲ್ಲಿ ಉದ್ಯಾನದ ನಿರಂತರ ನಿರ್ವಹಣೆ ಹಾಗೂ ಸಾರ್ವಜನಿಕರ ಬಳಕೆಗೆ ಆದ್ಯತೆ ಸಿಗಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande