
ಬಳ್ಳಾರಿ, 21 ನವೆಂಬರ್ (ಹಿ.ಸ.)
ಅಕ್ರಮ ಸಂಬಂಧದ ಶಂಕೆಯಿಂದ ತನ್ನ ಸ್ವಂತ ಅಣ್ಣನ ಮೇಲೆಯೇ ತೀವ್ರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಸಹೋದರನಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 6 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 15,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಲಿಂಗ ನಗರದ 1ನೇ ಕ್ರಾಸ್ ನ ಅಂಗನವಾಡಿ ಕೇಂದ್ರದ ಬಳಿ ವಾಸವಿದ್ದ ಮಂಜುನಾಥ.ಟಿ ಶಿಕ್ಷೆಗೊಳಗಾದ ಅಪರಾಧಿ.
ಘಟನೆ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ ಕಲಂ 115(2), 118(1), 109(1), 352, 351(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಬ್ರೂಸ್ ಪೇಟೆ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ.ಜಿ ಅವರು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 10 ಸಾಕ್ಷಿದಾರರ ವಿಚಾರಣೆ ನಡೆದು, ವಾದ-ಪ್ರತಿವಾದಗಳನ್ನು ಆಲಿಸಿದ ಬಳ್ಳಾರಿಯ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಎ. ಮೋಹನ್ ಅವರು ಆರೋಪಿಯ ಮೇಲಿನ ಆರೋಪಗಳು ಸಾಬೀತಾಗಿರುವುದನ್ನು ಪರಿಗಣಿಸಿ ನವೆಂಬರ್ 20 ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಲಕ್ಷಿದೇವಿ ಪಾಟೀಲ್ ಅವರು ವಾದ ಮಂಡಿಸಿದ್ದರು. ನ್ಯಾಯಾಲಯಕ್ಕೆ ಸಕಾಲದಲ್ಲಿ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಬ್ರೂಸ್ಪೇಟೆ ಠಾಣೆಯ ಸಿಬ್ಬಂದಿಗಳಾದ ರವಿಚಂದ್ರ.ಪಿ.ಬಿ, ಮಂಜು.ಕೆ ಹಾಗೂ ಪೊಂಪಯ್ಯ ಅವರು ಸಹಕರಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್