
ಗದಗ, 21 ನವೆಂಬರ್ (ಹಿ.ಸ.)
ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ದೇಶದ 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವ ಮಹತ್ವದ ಕ್ಷೇತ್ರವಾಗಿರುವ ಕೃಷಿಯಲ್ಲಿ, ಇನ್ನು ಮುಂದೆ ಉತ್ಪಾದನೆ ಹೆಚ್ಚಿಸುವುದರ ಜತೆಗೆ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ಹಾಗೂ ಆಹಾರ ಸಂಸ್ಕರಣೆಗೆ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಈಶ್ವರ ಬಿ. ಖಂಡ್ರೆ ಹೇಳಿದರು.
ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಿಲ್ಪಾರ್) ಸಂಯುಕ್ತ ಆಶ್ರಯದಲ್ಲಿ ಶನಿವಾರ ಗ್ರಾಮ ಗಂಗೋತ್ರಿ ಆವರಣದ ಕೌಶಲ ವಿಕಾಸ ಭವನದಲ್ಲಿ ಆಯೋಜಿಸಿದ್ದ ‘ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆಯ ಕಾನೂನು ವ್ಯವಸ್ಥೆ: ದೃಷ್ಟಿಕೋನಗಳು ಮತ್ತು ಸವಾಲುಗಳು’ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಆಹಾರದ ಕೊರತೆ ಎದುರಿಸುತ್ತಿದ್ದ ಭಾರತ, ಇಂದು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದಕ್ಕೆ ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಹಸಿರು ಕ್ರಾಂತಿ ಪ್ರಮುಖ ಕಾರಣವಾಗಿದೆ. ಈಗ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಘಟಿತ ಮಾರುಕಟ್ಟೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಮೂಲಕ ರೈತರ ಆದಾಯ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ ಎಂದರು.
ಕೃಷಿ ವೆಚ್ಚ ತಗ್ಗಿಸಲು ಸಂಶೋಧನೆ ಅಗತ್ಯ
ನೆಲ ಉಳುಮೆಯಿಂದ ಬಿತ್ತನೆ, ಬೆಳೆ ಪೋಷಣೆ ಹಾಗೂ ಕೊಯ್ಲಿನವರೆಗೆ ಎಲ್ಲ ಹಂತಗಳಲ್ಲಿಯೂ ಕೃಷಿ ವೆಚ್ಚ ಕಡಿಮೆ ಮಾಡುವ ಬಗ್ಗೆ ಸಂಶೋಧಕರು ಮತ್ತು ಕೃಷಿ ವಿಜ್ಞಾನಿಗಳು ಗಮನ ಹರಿಸಬೇಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ನೀಡುವ, ಕೀಟಬಾಧೆ ತಡೆದುಕೊಳ್ಳುವ ಹಾಗೂ ಕಡಿಮೆ ನೀರಿನಲ್ಲಿಯೂ ಬೆಳೆಯುವ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸಬೇಕು. ಭೂಮಿಯ ಫಲವತ್ತತೆ ಕಾಪಾಡುವ ಸಂಶೋಧನೆಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ರೈತರು ರಫ್ತಿನಲ್ಲೂ ಪಾಲುದಾರರಾಗಲಿ
ಭಾರತ ಕೃಷಿ ಉತ್ಪಾದನೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಆದರೆ ಕೃಷಿ ಸರಬರಾಜು ಸರಪಳಿಯಲ್ಲಿ ರೈತರಿಗೆ ನ್ಯಾಯಯುತ ಬೆಲೆ ಮತ್ತು ಲಾಭ ದೊರೆಯುವಂತೆ ಮಾಡುವುದು ಇಂದಿನ ಸವಾಲಾಗಿದೆ. ರೈತರು ಕೇವಲ ಉತ್ಪಾದನೆಗೆ ಸೀಮಿತವಾಗದೆ ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರುಕಟ್ಟೆ ಹಾಗೂ ರಫ್ತು ಚಟುವಟಿಕೆಗಳಲ್ಲಿಯೂ ಪಾಲುದಾರರಾಗಬೇಕು ಎಂದು ಸಚಿವರು ಹೇಳಿದರು.
ಕೊಯ್ಲಿನ ನಂತರ ಧಾನ್ಯಗಳು ಮಳೆ, ತೇವಾಂಶ, ಕೀಟ ಹಾಗೂ ಇಲಿಗಳಿಂದ ಹಾಳಾಗದಂತೆ ಸಂರಕ್ಷಿಸುವ ವ್ಯವಸ್ಥೆ ಬಲಪಡಿಸಬೇಕು. ಆಹಾರ ಧಾನ್ಯಗಳನ್ನು ದೀರ್ಘಕಾಲ ಸುರಕ್ಷಿತವಾಗಿ ಸಂಗ್ರಹಿಸುವ ತಂತ್ರಜ್ಞಾನ ರೈತರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂದರು.
ಗ್ರಾಮೀಣ ರಸ್ತೆ ಅಭಿವೃದ್ಧಿಯಿಂದ ಆರ್ಥಿಕತೆಗೆ ಬಲ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 16 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, 15 ಸಾವಿರ ಕಿ.ಮೀ. ಗ್ರಾಮೀಣ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿದೆ. ಉತ್ತಮ ರಸ್ತೆ ಸಂಪರ್ಕದಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಹೇಳಿದರು.
ಭಾರತೀಯ ಕೃಷಿಯ ಭವಿಷ್ಯ ಉತ್ಪಾದನೆ, ಸಂಸ್ಕರಣೆ, ತಂತ್ರಜ್ಞಾನ, ಕಾನೂನು ಮತ್ತು ಮಾರುಕಟ್ಟೆಗಳನ್ನು ಸಮನ್ವಯಗೊಳಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಕಾನೂನು ಚೌಕಟ್ಟು ಕೃಷಿ ಉದ್ಯಮವನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ರೈತರನ್ನು ಸಬಲಗೊಳಿಸಿ, ಗ್ರಾಹಕರನ್ನು ರಕ್ಷಿಸಿ, ಉದ್ಯಮಿಗಳನ್ನು ಉತ್ತೇಜಿಸುವಂತಿರಬೇಕು. ವಿಚಾರ ಸಂಕಿರಣದ ಚರ್ಚೆಗಳ ಫಲಿತಾಂಶ ಕೊನೆಯ ರೈತರಿಗೂ ತಲುಪಲಿ ಎಂದು ಸಚಿವ ಈಶ್ವರ ಖಂಡ್ರೆ ಆಶಿಸಿದರು.
ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ
ಗದಗ ಶಾಸಕ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಭಾರತ ಹಳ್ಳಿಗಳ ದೇಶವಾಗಿದ್ದು, ಗ್ರಾಮಗಳೇ ದೇಶದ ಆತ್ಮ. ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಅನ್ನ, ವಸತಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಅಭಿವೃದ್ಧಿಯ ಪ್ರಮುಖ ಉದ್ದೇಶವಾಗಬೇಕು ಎಂದರು.
ಗ್ರಾಮೀಣ ಜನರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಕೃಷಿ ಆಧಾರಿತ ಉದ್ಯಮಗಳು ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಸಂಗತಿಯಾಗಿದ್ದು, ರೈತರ ರಕ್ಷಣೆಗಾಗಿ ಸರ್ಕಾರಗಳು ಗಂಭೀರ ಕ್ರಮ ಕೈಗೊಳ್ಳಬೇಕು. ಕೃಷಿ ಉದ್ಯಮದಲ್ಲಿ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಆಹಾರ ಸಂಸ್ಕರಣೆಯಲ್ಲಿ ಅಪಾರ ಅವಕಾಶ
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಹಾರ ಸಂಸ್ಕರಣಾ ಕ್ಷೇತ್ರವು ರೈತರ ಆದಾಯ ಹೆಚ್ಚಿಸಲು, ಕೊಯ್ಲಿನ ನಂತರದ ನಷ್ಟ ಕಡಿಮೆ ಮಾಡಲು, ಗ್ರಾಮೀಣ ಉದ್ಯೋಗ ಸೃಷ್ಟಿಸಲು ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು ಅಪಾರ ಅವಕಾಶಗಳನ್ನು ಹೊಂದಿದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಅನುಕೂಲಕರ ಕಾನೂನು ಚೌಕಟ್ಟು, ಸಮರ್ಥ ಸಂಸ್ಥೆಗಳು ಮತ್ತು ಸರಳ ನಿಯಂತ್ರಣಾತ್ಮಕ ಪ್ರಕ್ರಿಯೆಗಳು ಅಗತ್ಯವಿವೆ ಎಂದರು.
ತಾಂತ್ರಿಕ ಗೋಷ್ಠಿಗಳು
ವಿಚಾರ ಸಂಕಿರಣದಲ್ಲಿ ಸುಸ್ಥಿರ ಕೃಷಿ ಉದ್ಯಮ, ಆಹಾರ ಸಂಸ್ಕರಣೆಯ ಕಾನೂನು ಸವಾಲುಗಳು ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ತಾಂತ್ರಿಕ ಗೋಷ್ಠಿಗಳು ನಡೆದವು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಅಧ್ಯಕ್ಷ ಅಶೋಕ ದಳವಾಯಿ ದಿಕ್ಸೂಚಿ ಭಾಷಣ ಮಾಡಿದರು.
ಪ್ರೊ. ಡಾ. ಚಂದ್ರಶೇಖರ ಎಂ. ಬಿರಾದಾರ, ಡಾ. ಎಚ್.ಬಿ. ಬಬಲಾದ, ಡಾ. ಸಪ್ನಾ ಎಸ್., ಸಿಎಫ್ಟಿಆರ್ಐ ಪ್ರತಿನಿಧಿಗಳು, ಡಾ. ಎನ್.ಎ. ಚರಂತಿಮಠ ಹಾಗೂ ಪ್ರೊ. ಡಾ. ಅಶೋಕ ಆರ್. ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಕಿಲ್ಪಾರ್ ನಿರ್ದೇಶಕ ಪ್ರೊ. ಸಿ.ಎಸ್. ಪಾಟೀಲ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಅಮರೇಶ ಯತಗಲ್, ಹಣಕಾಸು ಅಧಿಕಾರಿ ಪ್ರಶಾಂತ್ ಜೆ.ಸಿ., ಸೇರಿದಂತೆ ಗಣ್ಯರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP