ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಸಂಕಲ್ಪ ತೊಡಿ: ಯುವಜನತೆಗೆ ಪ್ರಧಾನಿ ಮೋದಿ ಕರೆ
ಐಐಟಿ ಖರಗ್‌ಪುರದ ಅಮೃತ ಮಹೋತ್ಸವದಲ್ಲಿ ವಿಶೇಷ ಸ್ಮರಣಾರ್ಥ ನಾಣ್ಯ ಬಿಡುಗಡೆ; ಚಿಪ್‌ನಿಂದ ಹಡಗಿನವರೆಗೆ ದೇಶದಲ್ಲೇ ತಯಾರಿಸುವ ಗುರಿ ನವದೆಹಲಿ, 21 ನವೆಂಬರ್ (ಹಿ.ಸ.): ಯುವಜನರು ಸೀಮಿತ ಚಿಂತನೆಯಿಂದ ಹೊರಬಂದು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದರ ಜತೆಗೆ ದೇಶದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲ
प्रधानमंत्री  शनिवार को पश्चिम बंगाल के आईआईटी खड़गपुर के प्लेटिनम जुबली समारोह को संबोधित कते हुए।


ಐಐಟಿ ಖರಗ್‌ಪುರದ ಅಮೃತ ಮಹೋತ್ಸವದಲ್ಲಿ ವಿಶೇಷ ಸ್ಮರಣಾರ್ಥ ನಾಣ್ಯ ಬಿಡುಗಡೆ; ಚಿಪ್‌ನಿಂದ ಹಡಗಿನವರೆಗೆ ದೇಶದಲ್ಲೇ ತಯಾರಿಸುವ ಗುರಿ

ನವದೆಹಲಿ, 21 ನವೆಂಬರ್ (ಹಿ.ಸ.):

ಯುವಜನರು ಸೀಮಿತ ಚಿಂತನೆಯಿಂದ ಹೊರಬಂದು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದರ ಜತೆಗೆ ದೇಶದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೊಡುಗೆ ನೀಡಬೇಕು. ಐಐಟಿ ಖರಗ್‌ಪುರದ 100ನೇ ಸಂಸ್ಥಾಪನಾ ದಿನಾಚರಣೆಯ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪ ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರದಲ್ಲಿ ಶನಿವಾರ ನಡೆದ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಥೆಯ 75 ವರ್ಷಗಳ ಸಾಧನೆಯ ಸ್ಮರಣಾರ್ಥ ವಿಶೇಷ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ 'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ 75 ಧ್ವನಿಗಳು' ಅಭಿಯಾನದಡಿ 75 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಐಐಟಿ ಖರಗ್‌ಪುರವು 75 ವರ್ಷಗಳ ಪಯಣದಲ್ಲಿ ದೇಶದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತವು ಎತ್ತಿನಗಾಡಿಯಿಂದ ವೇಗದ ರೈಲಿನವರೆಗೆ, ಅಂಚೆ ಪತ್ರಗಳಿಂದ ಸಾಮಾಜಿಕ ಮಾಧ್ಯಮಗಳವರೆಗೆ ಸುದೀರ್ಘ ಪಯಣ ಸಾಗಿದೆ. ಪ್ರತಿಯೊಂದು ಕಾಲಘಟ್ಟದಲ್ಲಿಯೂ ದೇಶದ ವೈಜ್ಞಾನಿಕ, ತಾಂತ್ರಿಕ ಮತ್ತು ಕೈಗಾರಿಕಾ ಸಾಮರ್ಥ್ಯಗಳನ್ನು ವೃದ್ಧಿಸುವಲ್ಲಿ ಈ ಸಂಸ್ಥೆ ಕೊಡುಗೆ ನೀಡಿದೆ ಎಂದು ಪ್ರಧಾನಿ ಹೇಳಿದರು.

ಐಐಟಿ ಖರಗ್‌ಪುರ ಸ್ಥಾಪನೆಯಾದ ಸಂದರ್ಭದಲ್ಲಿ ದೇಶಕ್ಕೆ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಎಂಜಿನಿಯರ್‌ಗಳ ಅಗತ್ಯವಿತ್ತು. ನಂತರ ಈ ಸಂಸ್ಥೆಯ ವಿದ್ಯಾರ್ಥಿಗಳು ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಕಾರ್ಯಕ್ರಮಗಳು, ಮಾಹಿತಿ ತಂತ್ರಜ್ಞಾನ ಹಾಗೂ ತಂತ್ರಾಂಶ ಉದ್ಯಮಗಳ ಬೆಳವಣಿಗೆಗೆ ಕೊಡುಗೆ ನೀಡಿದರು. ಇದೀಗ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸುವಲ್ಲಿಯೂ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಯುವಜನರು ತಮ್ಮ ಪ್ರತಿಭೆ, ಕನಸುಗಳು ಮತ್ತು ದೇಶದ ಸಾಮರ್ಥ್ಯಗಳಿಗೆ ಮಿತಿಗಳನ್ನು ವಿಧಿಸಿಕೊಳ್ಳಬಾರದು. ಚಿಂತನೆಯ ಎಲ್ಲೆಗಳನ್ನು ಮೀರಿ ಸಾಗಿದಾಗ ಮಾತ್ರ ರಾಷ್ಟ್ರಗಳು ತಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಸಾಧ್ಯ ಎಂದು ಮೋದಿ ಹೇಳಿದರು.

ಅರೆವಾಹಕ ಚಿಪ್ ಉತ್ಪಾದನಾ ಕ್ಷೇತ್ರವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಹಿಂದೆ ಭಾರತದಲ್ಲಿ ಚಿಪ್ ತಯಾರಿಕೆ ಸಾಧ್ಯವೇ ಎಂಬ ಪ್ರಶ್ನೆಗಳು ಎದುರಾಗುತ್ತಿದ್ದವು. ಆದರೆ ಈಗ ದೇಶದಲ್ಲಿ ಹಲವು ಅರೆವಾಹಕ ಉತ್ಪಾದನಾ ಘಟಕಗಳು ಆರಂಭವಾಗಿದ್ದು, ಭಾರತ ಚಿಪ್‌ಗಳನ್ನು ರಫ್ತು ಮಾಡುವ ಹಂತಕ್ಕೂ ತಲುಪಿದೆ. ಮುಂದಿನ ದಿನಗಳಲ್ಲಿ ಚಿಪ್‌ನಿಂದ ಹಿಡಿದು ಹಡಗಿನವರೆಗೆ ಎಲ್ಲವನ್ನೂ ದೇಶದಲ್ಲಿಯೇ ತಯಾರಿಸಲಾಗುವುದು. ಈ ಗುರಿ ಸಾಧನೆಯಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿರಲಿದೆ ಎಂದು ಹೇಳಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಹಿಂದೆ ಈ ಕ್ಷೇತ್ರದಲ್ಲಿ ಯುವಜನರಿಗೆ ಅವಕಾಶಗಳು ಸೀಮಿತವಾಗಿದ್ದವು. ಇದೀಗ ಬಾಹ್ಯಾಕಾಶ ಕ್ಷೇತ್ರವನ್ನು ಅವರಿಗಾಗಿ ಮುಕ್ತಗೊಳಿಸಲಾಗಿದೆ ಎಂದರು.

ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ ಪವನ್ ಅವರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯನ್ನು ಸ್ಥಾಪಿಸಿ, ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆಗೆ ಕೊಡುಗೆ ನೀಡಿರುವುದು ಇದಕ್ಕೆ ಉದಾಹರಣೆಯಾಗಿದೆ. ದೇಶದ ಹಲವು ನವೋದ್ಯಮಗಳು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ವೇಗ ನೀಡುತ್ತಿವೆ ಎಂದು ತಿಳಿಸಿದರು.

ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಮೋದಿ, ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಸೀಮಿತ ಚಿಂತನೆಯಿಂದ ಹೊರಬಂದು ಹೊಸ ನೀತಿಗಳನ್ನು ರೂಪಿಸುವುದು ಹಾಗೂ ಬಡವರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದು ಹೇಳಿದರು.

ಐಐಟಿ ಖರಗ್‌ಪುರ ನಿರ್ಮಾಣವಾಗಿರುವ ಸ್ಥಳವು ಹಿಂದೆ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧನದಲ್ಲಿಡುವ ಶಿಬಿರವಾಗಿತ್ತು. ಪಶ್ಚಿಮ ಬಂಗಾಳದ ನೆಲವು ವಿಚಾರಧಾರೆಗಳು ಮತ್ತು ರಾಷ್ಟ್ರೀಯ ಚಳವಳಿಗಳಿಗೆ ಮಹತ್ವದ ಕೊಡುಗೆ ನೀಡಿದೆ. ಅಂದು ಇದೇ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಸಂಕಲ್ಪ ತೊಟ್ಟಿದ್ದರು. ಇಂದು ಇದೇ ನೆಲದಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಜನರು ತಮ್ಮ ನಾವೀನ್ಯತೆ ಮತ್ತು ಆಲೋಚನೆಗಳ ಮೂಲಕ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ವಿದ್ಯಾರ್ಥಿಗಳು ರಾಷ್ಟ್ರವೇ ಮೊದಲು ಎಂಬ ಭಾವನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ ಅವರು, ಮುಂಬರುವ ಎರಡು ದಶಕಗಳು ಯುವಜನರ ಜೀವನ ಮತ್ತು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಣಾಯಕವಾಗಿವೆ. ದೇಶ ಎದುರಿಸುತ್ತಿರುವ ಯಾವ ಸವಾಲಿಗೆ ತಾವು ಪರಿಹಾರ ನೀಡಬಹುದು ಎಂಬುದನ್ನು ಪ್ರತಿಯೊಬ್ಬ ಯುವಕ ಮತ್ತು ಯುವತಿಯೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದರು.

ಐಐಟಿ ಖರಗ್‌ಪುರದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ 100ನೇ ವಾರ್ಷಿಕೋತ್ಸವ ಆಚರಿಸುವ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು ಎಂಬ ಸಂಕಲ್ಪ ತೊಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande