
ಬಳ್ಳಾರಿ, 19 ನವೆಂಬರ್ (ಹಿ.ಸ.)
ತುಂಗಭದ್ರ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 128ನೇ ಮುಂಗಾರು ಹಂಗಾಮಿನ ಬೆಳೆದು ನಿಂತ ಬೆಳೆಗಳಿಗೆ ನೀರಾವರಿ ಸಲಹಾ ಸಮಿತಿ ಸಭೆಯು ಬುಧವಾರ ಜರುಗಿದ್ದು, ಪ್ರಸ್ತುತ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಪ್ರಸ್ತುತ ಜಲಾಶಯದಲ್ಲಿ ಎಲ್ ನಿನೋ ಪರಿಣಾಮದಿಂದ ನೀರಿನ ಕೊರತೆ ಉಂಟಾಗಿದ್ದು, ಕುಡಿಯುವ ನೀರಿಗಾಗಿ ಕಾಯ್ದಿರಿಸಿದ ಪ್ರಮಾಣದಲ್ಲಿ ನಿಂತ ಬೆಳೆಗಳನ್ನು ಸಂರಕ್ಷಿಸಲು ಈ ಕೆಳಗಿನಂತೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
*ವೇಳಾಪಟ್ಟಿ:*
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ: ನವೆಂಬರ್ 21 ರಿಂದ 28 ರವರೆಗೆ 3000 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಲಾಗುವುದು.
ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆ: ನವೆಂಬರ್ 21 ರಿಂದ 28 ರವರೆಗೆ 550 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಲಾಗುವುದು.
ತುಂಗಭದ್ರ ಬಲದಂಡೆ ಮೇಲ್ಮಟ್ಟದ ಕಾಲುವೆ: ನವೆಂಬರ್ 21 ರಿಂದ 30 ರವರೆಗೆ ನೀರು ನಿಲುಗಡೆ ಮಾಡಲಾಗಿದ್ದು, ನಂತರ ಡಿಸೆಂಬರ್ 01 ರಿಂದ 08 ರವರೆಗೆ 1000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುತ್ತದೆ.
ರಾಯ ಬಸವಣ್ಣ ಕಾಲುವೆ: ನವೆಂಬರ್ 21 ರಿಂದ 30 ರವರೆಗೆ ನೀರು ನಿಲುಗಡೆ ಮಾಡಲಾಗುತ್ತದೆ. ಮುಂದುವರಿದು ಡಿಸೆಂಬರ್ 01 ರಿಂದ 10 ರವರೆಗೆ 180 ಕ್ಯೂಸೆಕ್ಸ್, ಡಿಸೆಂಬರ್ 11 ರಿಂದ 2027ರ ಜನವರಿ 10 ರವರೆಗೆ ನೀರು ನಿಲುಗಡೆ ಹಾಗೂ 2027ರ ಜನವರಿ 11 ರಿಂದ ಮೇ 31 ರವರೆಗೆ 150 ಕ್ಯೂಸೆಕ್ಸ್ ನಂತೆ ಕ್ರಮವಾಗಿ 10 ದಿನ ನೀರು ನಿಲ್ಲಿಸಿ, 10 ದಿನ ನೀರನ್ನು ಹರಿಸಲಾಗುತ್ತದೆ.
ಎಡದಂಡೆ ವಿಜಯನಗರ ಕಾಲುವೆ: ಡಿಸೆಂಬರ್ 29 ರಿಂದ 2027 ರ ಜನವರಿ 10 ರವರೆಗೆ ನೀರು ನಿಲುಗಡೆ ಮಾಡಲಾಗಿದ್ದು, ನಂತರ ಜನವರಿ 11 ರಿಂದ ಮೇ 10 ರವರೆಗೆ 60 ಕ್ಯೂಸೆಕ್ಸ್ ನಂತೆ ಕ್ರಮವಾಗಿ 10 ದಿನ ನೀರು ನಿಲ್ಲಿಸಿ, 10 ದಿನ ನೀರನ್ನು ಹರಿಸಲಾಗುವುದು.
ಜಲಾಶಯದಲ್ಲಿ ನೀರಿನ ಒಟ್ಟು ಲಭ್ಯತೆಯಿಂದ ಕುಡಿಯುವ ನೀರಿಗಾಗಿ 5.500 ಟಿ.ಎಂ.ಸಿ ನೀರನ್ನು ಕಾಯ್ದಿರಿಸಲಾಗಿದೆ. ನೀರಿನ ತೀವ್ರ ಕೊರತೆ ಇರುವುದರಿಂದ ಈ ಬಾರಿ ಹಿಂಗಾರು ಹಂಗಾಮಿಗೆ ಯಾವುದೇ ನೀರು ಒದಗಿಸಲಾಗುವುದಿಲ್ಲ ಎಂದು ಸಮಿತಿಯ ಅಧ್ಯಕ್ಷರಾದ ಶಿವರಾಜ್ ಎಸ್. ತಂಗಡಗಿ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್