
ಉಡುಪಿ, 19 ನವೆಂಬರ್ (ಹಿ.ಸ.):
ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು, ಮಾದಕ ವಸ್ತು ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15.98 ಲಕ್ಷ ರೂಪಾಯಿ ಹಣ ದೋಚಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ದೂರುದಾರರಿಗೆ ಅಕ್ಟೋಬರ್ 18ರಂದು ವಂಚಕರಿಂದ ಕರೆ ಬಂದಿತ್ತು. ದೆಹಲಿಯಲ್ಲಿ ಅವರ ಹೆಸರಿನಲ್ಲಿರುವ ಐಸಿಐಸಿಐ ಬ್ಯಾಂಕ್ ಪಾಸ್ಬುಕ್ ಪತ್ತೆಯಾಗಿದ್ದು, ಪಂಕಜ್ ಶರ್ಮಾ ಎಂಬಾತನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ ಎಂದು ವಂಚಕರು ನಂಬಿಸಿದ್ದಾರೆ.
ಈ ವೇಳೆ ತಾನು ದೆಹಲಿಯ ಸಿಬಿಐ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ದೂರುದಾರರನ್ನು ತಕ್ಷಣ ಬಂಧಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಬೆದರಿಸಿದ್ದಾನೆ. ಕೂಡಲೇ ದೆಹಲಿಗೆ ಆಗಮಿಸಬೇಕು ಅಥವಾ ವಿಡಿಯೋ ಕರೆ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ್ದಾನೆ.
ಇದರಿಂದ ಆತಂಕಗೊಂಡ ದೂರುದಾರರಿಂದ ವಂಚಕರು ಅವರ ಬಳಿಯಿರುವ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ತನಿಖೆಯ ನೆಪದಲ್ಲಿ ತಮ್ಮ ಬಳಿ ಇರುವ ಎಲ್ಲ ಹಣವನ್ನು ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.
ವಂಚಕರ ಬೆದರಿಕೆಗೆ ಹೆದರಿದ ದೂರುದಾರರು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 15.98 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಬಳಿಕ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತು ದೂರು ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R