ಸಚಿವ ಚಲುವರಾಯಸ್ವಾಮಿ ತವರೂರಲ್ಲೇ ಅಕ್ರಮ ಗಣಿಗಾರಿಕೆ: ಜಿಲ್ಲಾಡಳಿತದ ವಿರುದ್ಧ ಸುರೇಶ್ ಗೌಡ ವಾಗ್ದಾಳಿ
ನಾಗಮಂಗಲದಲ್ಲಿ 12 ಕಡೆ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಸಿವಿಸಿ, ಇಡಿ ತನಿಖೆಗೆ ದೂರು ಸಲ್ಲಿಸುವ ಎಚ್ಚರಿಕೆ
Suresh-Gowda-Alleges-Illegal-Mining-In-Nagamangala-Targets-Minister-Chaluvarayaswamy


ಮಂಡ್ಯ, 19 ನವೆಂಬರ್ (ಹಿ.ಸ.):

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ತವರು ಕ್ಷೇತ್ರವಾದ ನಾಗಮಂಗಲ ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಸುರೇಶ್ ಗೌಡ, ಸಚಿವರು, ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ ಸುಮಾರು 12 ಕಡೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ರಾಜಧನ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಅಕ್ರಮ ಗಣಿಗಾರಿಕೆಯಲ್ಲಿ ಪ್ರಭಾವಿಗಳು ಮತ್ತು ರಾಜಕಾರಣಿಗಳ ಕೈವಾಡವಿದ್ದು, ಜಿಲ್ಲಾಡಳಿತವು ಅವರ ಒತ್ತಡಕ್ಕೆ ಮಣಿದು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದೆ ಎಂದು ದೂರಿದರು.

ಗಂಗಸಮುದ್ರ ಗ್ರಾಮದ ಸರ್ವೆ ನಂಬರ್ 143ರ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸುರೇಶ್ ಗೌಡ, 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಶ್ವಥಿ ಅವರು ಎಚ್ಸಿಕೆ ಸ್ಟೋನ್ ಕ್ರಷರ್ನ ಪರವಾನಗಿಯನ್ನು ರದ್ದುಗೊಳಿಸಿದ್ದರು.

2022ರಲ್ಲಿ ಅರಣ್ಯ ಇಲಾಖೆಯು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನೂ ಹಿಂಪಡೆದಿತ್ತು. ಆದರೂ ಅರಣ್ಯ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡದೆ ಹೈಕೋರ್ಟ್ಗೆ ತಪ್ಪು ಮಾಹಿತಿ ನೀಡಿ ಆದೇಶ ಪಡೆಯಲಾಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂಬ ಆರೋಪವನ್ನೂ ಮಾಡಿದರು. ಕೇವಲ ಮೂರು ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಸುಮಾರು 25 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನಿರಾಕರಿಸುವಂತೆ ವರದಿ ನೀಡಿದ್ದರೂ ಜಿಲ್ಲಾಧಿಕಾರಿಗಳು ಭೂಪರಿವರ್ತನೆಗೆ ಅನುಮತಿ ನೀಡಿದ್ದಾರೆ ಎಂದು ದೂರಿದರು.

ಅರಣ್ಯ ಇಲಾಖೆ ಕಾರ್ಯದರ್ಶಿಗಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರೂ ಚಟುವಟಿಕೆಗಳು ಮುಂದುವರಿದಿವೆ. ಇಜ್ಜಲಘಟ್ಟದ ವನ್ಯಜೀವಿ ಅರಣ್ಯ ಪ್ರದೇಶದಲ್ಲಿಯೂ 1999ರಿಂದ ಸಚಿವರ ಕುಟುಂಬಕ್ಕೆ ಸಂಬಂಧಿಸಿದ ಗಣಿಗಾರಿಕೆ ನಡೆಯುತ್ತಿದೆ. ಲಕ್ಷ್ಮೀಪುರದಲ್ಲಿ ಆರ್ನಮೆಂಟಲ್ ಸ್ಟೋನ್ ಗಣಿಗಾರಿಕೆಗೆ ಸಚಿವರ ಅಣ್ಣನ ಮಗನಿಗೆ ನಿಯಮಬಾಹಿರವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಪ್ರತಿ ಶನಿವಾರ ಕಲೆಕ್ಷನ್ ದಂಧೆ ನಡೆಯುತ್ತಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಅಕ್ರಮ ಗಣಿಗಾರಿಕೆಯಿಂದ ಪ್ರತಿವರ್ಷ ಸರ್ಕಾರಕ್ಕೆ 400ರಿಂದ 500 ಕೋಟಿ ರೂಪಾಯಿ ರಾಜಧನ ನಷ್ಟವಾಗುತ್ತಿದೆ. ರದ್ದುಗೊಂಡ ಪರವಾನಗಿಗಳನ್ನು ರಾಜಕೀಯ ಒತ್ತಡದ ಮೂಲಕ ಮತ್ತೆ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸುರೇಶ್ ಗೌಡ ಆರೋಪಿಸಿದರು.

ನಾಗಮಂಗಲ ತಾಲೂಕಿನ ಅಕ್ರಮ ಗಣಿಗಾರಿಕೆ ಕುರಿತು ಸಂಬಂಧಪಟ್ಟ ಇಲಾಖೆಗೆ ಅಧಿಕೃತ ದೂರು ಸಲ್ಲಿಸಲಾಗುವುದು. ಅಲ್ಲದೆ, ಕೇಂದ್ರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ದೂರು ನೀಡಿ ತನಿಖೆಗೆ ಒತ್ತಾಯಿಸಲಾಗುವುದು. ಅಕ್ರಮ ಗಣಿಗಾರಿಕೆ ತಡೆಯಲು ಜಿಲ್ಲಾಡಳಿತ ವಿಫಲವಾದರೆ ಅಧಿಕಾರಿಗಳೂ ತನಿಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಚಲುವರಾಯಸ್ವಾಮಿ ಅವರ ಕಾರ್ಯವೈಖರಿ ಮತ್ತು ಭ್ರಷ್ಟಾಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮಗಳಲ್ಲಿ ಸಚಿವರ ಕುಟುಂಬಸ್ಥರು ಹಾಗೂ ಬೆಂಬಲಿಗರೇ ಭಾಗಿಯಾಗಿದ್ದಾರೆ ಎಂದು ಪುನರುಚ್ಚರಿಸಿದರು.

ತಮ್ಮ ಆರೋಪಗಳನ್ನು ಸಚಿವರು ಹಾಗೂ ಅವರ ಕುಟುಂಬಸ್ಥರು ನಿರಾಕರಿಸಿದರೆ ತಾವು ನಂಬಿರುವ ಅಜ್ಜನ ಮುಂದೆ ಬಂದು ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸುರೇಶ್ ಗೌಡ ಸವಾಲು ಹಾಕಿದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಕಟ್ಟುನಿಟ್ಟಿನ ಆದೇಶಗಳಿದ್ದರೂ ಅಧಿಕಾರಿಗಳು ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande