ಹುನಗುಂದದಲ್ಲಿ ಕಾಶಪ್ಪನವರ–ದೊಡ್ಡನಗೌಡ ಪಾಟೀಲ ವಾಕ್ಸಮರ ತಾರಕಕ್ಕೆ
ಬಾಗಲಕೋಟೆ, 19 ನವೆಂಬರ್ (ಹಿ.ಸ.) ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಭಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಇದೀಗ ವೈಯ
ಪರಸ್ಪರ ವಾಕ್ ಸಮರ


ಬಾಗಲಕೋಟೆ, 19 ನವೆಂಬರ್ (ಹಿ.ಸ.)

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಭಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಇದೀಗ ವೈಯಕ್ತಿಕ ಟೀಕೆಗಳಿಗೂ ಇಳಿದಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ವಲಸೆ ಬಂದವನು, ಬಗಲಲ್ಲಿ ಸೀರೆ ಇಟ್ಕೊಂಡು ಬಂದವನು’ ಎಂಬ ಏಕವಚನದ ಹಾಗೂ ವೈಯಕ್ತಿಕ ಟೀಕೆಯ ಹೇಳಿಕೆ ಮೂಲಕ ರಾಜಕೀಯವಾಗಿ ತಿರುಗೇಟು ನೀಡಿದ್ದಾರೆ. ಸಚಿವರ ಈ ಹೇಳಿಕೆ ಇದೀಗ ಸ್ಥಳೀಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕಳೆದ ಕೆಲವು ದಿನಗಳಿಂದ ಇಬ್ಬರು ನಾಯಕರ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಭಿವೃದ್ಧಿ ವಿಚಾರಗಳು, ರಾಜಕೀಯ ಪ್ರಾಬಲ್ಯ ಹಾಗೂ ಪರಸ್ಪರ ಆರೋಪಗಳ ಸುತ್ತ ನಡೆಯುತ್ತಿರುವ ಈ ಸಂಘರ್ಷದಲ್ಲಿ ವೈಯಕ್ತಿಕ ಟೀಕೆಗಳೂ ಮುನ್ನೆಲೆಗೆ ಬಂದಿವೆ.

ರಾಜಕೀಯ ಜಗಳದಿಂದ ಅಭಿವೃದ್ಧಿ ಮರೆಯಾಗುತ್ತಿದೆಯೇ

ಕ್ಷೇತ್ರದ ಇಬ್ಬರು ಪ್ರಮುಖ ನಾಯಕರ ನಡುವಿನ ಈ ವಾಕ್ಸಮರ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಕೆಲವರು ಉಭಯ ನಾಯಕರ ಹೇಳಿಕೆಗಳನ್ನು ರಾಜಕೀಯ ಮನರಂಜನೆಯಂತೆ ನೋಡುತ್ತಿದ್ದರೆ, ಇನ್ನೂ ಕೆಲವರು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳು ಹಿಂದೆ ಸರಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ನಗರದ ಹಿರಿಯ ನಾಗರಿಕ ಹಾಗೂ ವ್ಯಾಪಾರಸ್ಥ ಸಣ್ಣಪ್ಪ ಬಲ್ಲಪ್ಪನವರ ಅಸಮಾಧಾನ ವ್ಯಕ್ತಪಡಿಸಿದ್ದು, ಇಬ್ಬರು ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದರಿಂದ ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳು ಮತ್ತು ರಾಜಕೀಯ ನಾಯಕರು ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಆದ್ಯತೆ ನೀಡುವ ಬದಲು ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಜನರ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜನರಿಗೆ ಬೇಕಿರುವುದು ವಾಕ್ಸಮರವಲ್ಲ, ಅಭಿವೃದ್ಧಿ

ಹುನಗುಂದ ಕ್ಷೇತ್ರದಲ್ಲಿ ರಾಜಕೀಯವಾಗಿ ಪ್ರಭಾವ ಹೊಂದಿರುವ ಇಬ್ಬರು ನಾಯಕರ ನಡುವಿನ ಸಂಘರ್ಷ ಮುಂದುವರಿದಿರುವುದು ಸ್ಥಳೀಯ ರಾಜಕೀಯ ಚರ್ಚೆಯ ವಿಷಯವಾಗಿದೆ. ಆದರೆ ಈ ರಾಜಕೀಯ ಕಿತ್ತಾಟದ ನಡುವೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು, ಜನರ ಬೇಡಿಕೆಗಳು ಹಾಗೂ ಸಾರ್ವಜನಿಕ ಸಮಸ್ಯೆಗಳು ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂಬುದು ನಾಗರಿಕರ ಒತ್ತಾಯವಾಗಿದೆ.

ಒಟ್ಟಿನಲ್ಲಿ, ಉಭಯ ನಾಯಕರ ವಾಕ್ಸಮರ ಯಾರ ರಾಜಕೀಯ ವರ್ಚಸ್ಸಿಗೆ ಅನುಕೂಲವಾಗಲಿದೆ ಎಂಬುದಕ್ಕಿಂತ, ಈ ಸಂಘರ್ಷದ ನಡುವೆ ಕ್ಷೇತ್ರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande