
ಬಾಗಲಕೋಟೆ, 19 ನವೆಂಬರ್ (ಹಿ.ಸ.)
ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸೇವೆ ಮತ್ತು ಕಲ್ಯಾಣ ಕಾರ್ಯಗಳಿಗೆ ಸರ್ಕಾರ ಸದಾ ಬದ್ಧವಾಗಿದ್ದು, ಸಮಾಜದ ಅಸಹಾಯಕರು ಮತ್ತು ವಿಶೇಷಚೇತನರ ನೆರವಿಗೆ ತಾವು ಯಾವತ್ತೂ ಸಿದ್ಧರಿರುವುದಾಗಿ ಸಚಿವ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.
ಇಳಕಲ್ ನಗರದಲ್ಲಿ ನವಜೀವನ ವೃದ್ಧಾಶ್ರಮದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ನೆರವಿನ ಅಗತ್ಯವಿರುವವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಆಶ್ರಮಗಳು ಅಸಹಾಯಕರಿಗೆ ಆಶ್ರಯ, ಆತ್ಮಸ್ಥೈರ್ಯ ಮತ್ತು ನೆಮ್ಮದಿಯ ಬದುಕು ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ವಿಶೇಷಚೇತನರ ಸಮಸ್ಯೆಗಳಿಗೆ ಸ್ಪಂದಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಅವರ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಹಾಗೂ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ನೆರವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಸಿದ್ಧವಿದೆ. ಅದರಲ್ಲೂ ವೈಯಕ್ತಿಕವಾಗಿ ತಾವು ವಿಶೇಷಚೇತನರ ನೆರವಿಗೆ ಯಾವತ್ತೂ ನಿಲ್ಲುವುದಾಗಿ ಅವರು ಭರವಸೆ ನೀಡಿದರು.
ನವಜೀವನ ವೃದ್ಧಾಶ್ರಮದ ನೂತನ ಕಟ್ಟಡವು ಹಿರಿಯ ನಾಗರಿಕರಿಗೆ ಉತ್ತಮ ವಾತಾವರಣದಲ್ಲಿ ವಾಸಿಸಲು ಅನುಕೂಲ ಕಲ್ಪಿಸಲಿ. ಆಶ್ರಮದ ಮೂಲಕ ನಡೆಯುವ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತಾರಗೊಂಡು ಸಮಾಜದ ನಿರ್ಗತಿಕರು ಮತ್ತು ಅಸಹಾಯಕರಿಗೆ ಆಸರೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಆಶ್ರಮದ ಪದಾಧಿಕಾರಿಗಳು, ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande