ಮೇಕೆದಾಟು ಯೋಜನೆಗೆ ಇಡೀ ರಾಜ್ಯದ ಬೆಂಬಲ: ಡಿ.ಕೆ. ಶಿವಕುಮಾರ್
ಕಾವೇರಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೇವೆ; ಕುಡಿಯುವ ನೀರಿಗಾಗಿ ಮಾತ್ರ ಜಲಾಶಯ ಬಳಕೆ
Mekedatu-Project-Has-Entire-States-Support-Says-DK-Shivakumar


ಬೆಂಗಳೂರು, 19 ನವೆಂಬರ್ (ಹಿ.ಸ.):

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಎಲ್ಲರೂ ಪಕ್ಷಭೇದ ಮರೆತು ಒಂದೇ ಧ್ವನಿಯಲ್ಲಿ ಬೆಂಬಲ ನೀಡಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಿರುವಾಗ ಕೆಲವರು ಅಸೂಯೆಯಿಂದ ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು‌ ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ನಗರದ ಜ್ಞಾನಜ್ಯೋತಿ ಸಭಾಂಗಣ ಹಾಗೂ ನೆಹರು ತಾರಾಲಯದ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕುಮಾರಸ್ವಾಮಿ ಅವರೂ ಮೇಕೆದಾಟು ಯೋಜನೆ ಆಗಬೇಕು ಎಂದು ಹೇಳಿದ್ದಾರೆ. ಒಂದೇ ದಿನದಲ್ಲಿ ಅನುಮತಿ ತೆಗೆದುಕೊಂಡು ಬರುತ್ತೇನೆ ಎಂದಿದ್ದರು. ಬಹುಶಃ ಅವರು ಆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ತಂದೆ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಪಾಪ, ಅವರ ಮಗ ಅಸೂಯೆಯಿಂದ ಏನೇನೋ ಮಾತನಾಡಬಹುದು. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದರು.

ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್‌ನಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ. ಕರ್ನಾಟಕ ತನ್ನ ವ್ಯಾಪ್ತಿಯಲ್ಲಿ ಅಣೆಕಟ್ಟು ನಿರ್ಮಿಸಿಕೊಳ್ಳಬಹುದು, ತಮಿಳುನಾಡಿಗೆ ಸಲ್ಲಬೇಕಾದ ನೀರನ್ನು ನೀಡಬೇಕು ಎಂಬ ನಿಲುವನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ತಮಿಳುನಾಡಿನವರು ಕೆಳಭಾಗದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ನಾವು ಖ್ಯಾತೆ ತೆಗೆಯಲು ಹೋಗಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸುಪ್ರೀಂಕೋರ್ಟ್‌ನಲ್ಲಿ ಈ ಆದೇಶ ಬಂದಿತ್ತು. ಬಳಿಕ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ತಿರಸ್ಕೃತವಾಗಿದೆ. ಸದ್ಯ ನಾವು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸಿದ್ದೇವೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯ ಭೂಮಿ ಒದಗಿಸುವ ನಿಟ್ಟಿನಲ್ಲಿಯೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಮೇಕೆದಾಟು ಯೋಜನೆ ಯಾವುದೇ ಒಂದು ಪಕ್ಷದ ಅಥವಾ ವ್ಯಕ್ತಿಯ ವಿಚಾರವಲ್ಲ. ಇದು ಇಡೀ ರಾಜ್ಯದ ಹಿತಾಸಕ್ತಿಯ ಪ್ರಶ್ನೆ. ಈ ಯೋಜನೆಯಿಂದ ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ನೇರ ಅನುಕೂಲವಾಗಲಿದೆ. ಪ್ರಮುಖವಾಗಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ. ಮೇಕೆದಾಟು ಒಂದು ಸಮತೋಲಿತ ಅಣೆಕಟ್ಟು ಆಗಿದ್ದು, ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕೃಷಿ ಉದ್ದೇಶಕ್ಕೆ ಈ ನೀರನ್ನು ಬಳಸುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಇಂದು ಇಡೀ ಪ್ರಪಂಚದ ಜನರನ್ನು ಆಕರ್ಷಿಸುತ್ತಿದೆ. ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಅವರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಜವಾಬ್ದಾರಿ. ಈ ಯೋಜನೆಯ ಮಹತ್ವವನ್ನು ನಾನು ಪ್ರಧಾನಮಂತ್ರಿಗಳ ಮುಂದೆಯೂ ಪ್ರಸ್ತಾಪಿಸಿದ್ದೇನೆ ಎಂದರು.

ಬರಗಾಲದಂತಹ ಸಂಕಷ್ಟದ ಸಂದರ್ಭಗಳಲ್ಲಿ 66 ಟಿಎಂಸಿ ನೀರು ಬಿಡಬೇಕಾದ ಸಮಯದಲ್ಲಿ ಮೇಕೆದಾಟು ಜಲಾಶಯದಿಂದ ಅನುಕೂಲವಾಗಲಿದೆ. ತಮಿಳುನಾಡಿನವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿದರೂ ನಾವು ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡಿ ನ್ಯಾಯ ಪಡೆದುಕೊಂಡಿದ್ದೇವೆ. ಕರ್ನಾಟಕಕ್ಕೆ ಎಷ್ಟು ನ್ಯಾಯ ಸಿಗಬೇಕೋ ಅಷ್ಟೇ ನ್ಯಾಯ ತಮಿಳುನಾಡಿಗೂ ಸಿಗಬೇಕು ಎಂಬುದು ನಮ್ಮ ನಿಲುವು. ನಾವು ನ್ಯಾಯಾಲಯದ ಆದೇಶ ಹಾಗೂ ಕಾನೂನನ್ನು ಗೌರವಿಸಿ ಪಾಲಿಸುತ್ತೇವೆ ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande