ಪಡಿತರ ಅಕ್ಕಿಗೆ ಬದಲಾಗಿ ನೇರ ಹಣ ವರ್ಗಾವಣೆ ಪ್ರಸ್ತಾವನೆ ಖಂಡಿಸಿ ಡಿ.3ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ
ಬಳ್ಳಾರಿ, 19 ನವೆಂಬರ್ (ಹಿ.ಸ.) ಪಡಿತರ ಅಕ್ಕಿಗೆ ಬದಲಾಗಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣ ಪಾವತಿಸುವ ಕೇಂದ್ರ ಸರ್ಕಾರದ ಚಿಂತನೆ ಹಾಗೂ ಕರ್ನಾಟಕ ಸರ್ಕಾರದ ಆಹಾರ ಕಿಟ್ ವಿತರಣೆಯ ಪ್ರಸ್ತಾವನೆಯನ್ನು ಖಂಡಿಸಿ ಡಿಸೆಂಬರ್ 3ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹ
ನ್ಯಾಯಬೆಲೆ : ದೆಹಲಿಯಲ್ಲಿ ಡಿಸೆಂಬರ್ 3 ರಂದು ಬೃಹತ್ ಪ್ರತಿಭಟನೆ


ಬಳ್ಳಾರಿ, 19 ನವೆಂಬರ್ (ಹಿ.ಸ.)

ಪಡಿತರ ಅಕ್ಕಿಗೆ ಬದಲಾಗಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣ ಪಾವತಿಸುವ ಕೇಂದ್ರ ಸರ್ಕಾರದ ಚಿಂತನೆ ಹಾಗೂ ಕರ್ನಾಟಕ ಸರ್ಕಾರದ ಆಹಾರ ಕಿಟ್ ವಿತರಣೆಯ ಪ್ರಸ್ತಾವನೆಯನ್ನು ಖಂಡಿಸಿ ಡಿಸೆಂಬರ್ 3ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಕ್ರಮಗಳು ನ್ಯಾಯಬೆಲೆ ಅಂಗಡಿ ಮಾಲೀಕರ ಹಿತಾಸಕ್ತಿಗೆ ವಿರುದ್ಧವಾಗಿವೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ದೇಶಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರ ವಿರೋಧವನ್ನು ಎದುರಿಸಲು ಸರ್ಕಾರಗಳು ಸಿದ್ಧವಾಗಬೇಕು ಎಂದು ಎಚ್ಚರಿಸಿದರು.

ಆಹಾರ ಇಲಾಖೆ ಸಚಿವರು ಉತ್ಸಾಹಿ ಯುವಕರಾಗಿದ್ದು, ಆಹಾರ ಕಿಟ್‌ಗಳನ್ನೇ ವಿತರಿಸಲು ಸರ್ಕಾರ ನಿರ್ಧರಿಸಿದರೆ ಅದಕ್ಕೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸೂಕ್ತ ಕಮಿಷನ್ ನೀಡಬೇಕು. ಪ್ರಸ್ತುತ ಪ್ರತಿ ತಿಂಗಳು 150 ರೂ. ಕಮಿಷನ್ ನೀಡಲಾಗುತ್ತಿದ್ದು, ಅದನ್ನು 250 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪಡಿತರ ಅಕ್ಕಿ ವಿತರಣೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳಿಗೆ ಕಡಿವಾಣ ಹಾಕಲು ತೊಗರಿ ಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಯನ್ನೂ ಪಡಿತರ ವ್ಯವಸ್ಥೆಯಡಿ ವಿತರಿಸಬೇಕು ಎಂದು ಮನವಿ ಮಾಡಿದರು.

ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 112 ನ್ಯಾಯಬೆಲೆ ಅಂಗಡಿಗಳಿವೆ. ಪ್ರತಿ ತಿಂಗಳ 15ನೇ ತಾರೀಕಿನೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಧಾನ್ಯಗಳನ್ನು ತಲುಪಿಸಬೇಕು. ವಿತರಕರಿಗೆ ನೀಡಬೇಕಾದ ಕಮಿಷನ್‌ನ್ನು ಕಾಲಕಾಲಕ್ಕೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಡಿತರ ವಿತರಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ, ಪಾಲಕ್ಷರೆಡ್ಡಿ, ದಾನರೆಡ್ಡಿ, ಮಾರುತಿ, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande