ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್
ಬಳ್ಳಾರಿ, 19 ನವೆಂಬರ್ (ಹಿ.ಸ.) ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಮ್ ಅವರು ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ಅವರ ಕುಂದುಕೊರತೆ ಮತ್ತು ಅಹವಾಲುಗಳನ್ನು ಜಿಪಂ ಆವರಣದಲ್ಲಿ ಗುರುವಾರ ಸ್ವೀಕರಿಸಿದರು. ಮೂಲಭೂತ ಸೌಕರ್ಯಗಳಾದ ವಸತಿ ಯೋಜನೆಗಳು ಹಾಗೂ ಸರ್ಕಾರದ ವಿವಿಧ ಸೌ
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್


ಬಳ್ಳಾರಿ, 19 ನವೆಂಬರ್ (ಹಿ.ಸ.)

ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಮ್ ಅವರು ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ಅವರ ಕುಂದುಕೊರತೆ ಮತ್ತು ಅಹವಾಲುಗಳನ್ನು ಜಿಪಂ ಆವರಣದಲ್ಲಿ ಗುರುವಾರ ಸ್ವೀಕರಿಸಿದರು.

ಮೂಲಭೂತ ಸೌಕರ್ಯಗಳಾದ ವಸತಿ ಯೋಜನೆಗಳು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಸಾರ್ವಜನಿಕರು ಈ ಸಂದರ್ಭದಲ್ಲಿ ಸಂಸದರ ಗಮನಕ್ಕೆ ತಂದರು. ಸಾರ್ವಜನಿಕರು ಸಲ್ಲಿಸಿದ ವಿವಿಧ ಮನವಿ ಪತ್ರಗಳನ್ನು ಪರಿಶೀಲಿಸಿದ ಸಂಸದರು, ಸಮಸ್ಯೆಗಳನ್ನು ಆಲಿಸಿದರು.

ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಸಂಸದ ಈ. ತುಕಾರಾಮ್ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತರಬೇಕಾದ ವಿಷಯಗಳು ಹಾಗೂ ವಿವಿಧ ಸಮಸ್ಯೆಗಳ ಕುರಿತು ಸಭೆಯ ಮೂಲಕ ಮಾಹಿತಿ ನೀಡಿದರೆ, ಅವುಗಳನ್ನು ಸಂಸತ್ನಲ್ಲಿ ಪ್ರಸ್ತಾಪಿಸಿ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಪ್ರಶಸ್ತಿ ಹಾಗೂ ಸೌಲಭ್ಯ ವಿತರಣೆ

ಸಂಡೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಪ್ರಶಸ್ತಿ ಹಾಗೂ ಮಂಜೂರಾತಿ ಪತ್ರಗಳನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.

ಕೌಶಲ್ಯ ಕರ್ನಾಟಕ ಪ್ರಶಸ್ತಿ:

ಸಂಡೂರು ತಾಲೂಕಿನ ಸೋನಿಯಾಗಾಂಧಿ ಸ್ವಸಹಾಯ ಸಂಘದ ಪ್ರತಿನಿಧಿ ಭಾಗ್ಯಬಾಯಿ ಅವರಿಗೆ 2026–27ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿ ಲಭಿಸಿದ ಪ್ರಯುಕ್ತ ಅಭಿನಂದನೆ ಸಲ್ಲಿಸಲಾಯಿತು. ಲಂಬಾಣಿ ಕಸೂತಿಯಲ್ಲಿ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ವಿವಿಧ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರಸ್ ಮೇಳಗಳಲ್ಲಿ ಮಾರಾಟ ಮಾಡಿರುವುದಲ್ಲದೆ, ದಿನಚರಿ ಹಾಗೂ ಡೈರಿಗಳಲ್ಲಿ ಕಸೂತಿ ಕಲೆಯನ್ನು ಜನಪ್ರಿಯಗೊಳಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಪಿಎಂಎಫ್ಎಂಇ ಯೋಜನೆ:

ಪ್ರಧಾನಮಂತ್ರಿ ಆಹಾರ ಸಂಸ್ಕರಣೆ ಯೋಜನೆಯಡಿ ಸಂಡೂರು ತಾಲೂಕಿನ ಖದೀಜಾ ಬಾನು ಅವರಿಗೆ 1,75,000 ಮಂಜೂರಾತಿ ಆದೇಶ ನೀಡಲಾಯಿತು. ಈ ಯೋಜನೆಯಡಿ ಕಿರು ಆಹಾರ ಸಂಸ್ಕರಣೆ ಉದ್ಯಮಕ್ಕೆ 10 ಲಕ್ಷ ವೆಚ್ಚವಾದರೆ, 5 ಲಕ್ಷ ಕೇಂದ್ರ ಸರ್ಕಾರದಿಂದ, 3 ಲಕ್ಷ ಬ್ಯಾಂಕ್ ಸಾಲದ ಮೂಲಕ ದೊರೆಯಲಿದ್ದು, ಫಲಾನುಭವಿ ಕೇವಲ 2 ಲಕ್ಷ ಭರಿಸಬೇಕಾಗುತ್ತದೆ. ಜೊತೆಗೆ ಚಾಮುಂಡೇಶ್ವರಿ (ಬಳ್ಳಾರಿ), ಹನುಮಂತಮ್ಮ (ಕಂಪ್ಲಿ), ನಿಂಗಮ್ಮ (ಕಂಪ್ಲಿ) ಹಾಗೂ ಬಸವರಾಜ್ ಅವರಿಗೂ ಆದೇಶ ಪತ್ರ ನೀಡಲಾಯಿತು.

ಭಾಗ್ಯಲಕ್ಷ್ಮಿ ಯೋಜನೆ:

ಭಾಗ್ಯಲಕ್ಷ್ಮಿ ಯೋಜನೆಯಡಿ ಇಬ್ಬರು ಹೆಣ್ಣುಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ 1,20,000 ರೂ. ಚೆಕ್ ನೀಡಲಾಯಿತು. ಈ ಯೋಜನೆಯಡಿ ಪೋಷಕರು ಅಂಗನವಾಡಿ ಕೇಂದ್ರದಿಂದ ಅರ್ಜಿ ಪಡೆದು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಮಗುವಿಗೆ 18 ವರ್ಷ ತುಂಬುವವರೆಗೆ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಓದಿರಬೇಕು, ಬಾಲ್ಯವಿವಾಹ ಆಗಿರಬಾರದು ಹಾಗೂ ಬಾಲಕಾರ್ಮಿಕ ಪದ್ಧತಿಗೆ ಒಳಗಾಗಿರಬಾರದು.

ಅದೇರೀತಿಯಾಗಿ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನ ತ್ರಿಚಕ್ರ ವಾಹನ ಮತ್ತು ಸಾಧನ-ಸಲಕರಣೆಗಳನ್ನು ಸಂಸದರು ವಿತರಿಸಿದರು.

ಸ್ವ-ಸಹಾಯ ಮಹಿಳಾ ಸಂಘಗಳ ಉತ್ಪನ್ನಗಳನ್ನು ಸ್ಥಳದಲ್ಲೇ ಖರೀದಿಸಿ ಪ್ರೋತ್ಸಾಹಿಸಿದ ಸಂಸದ ಈ. ತುಕಾರಾಮ್:

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಮಹಿಳಾ ಗುಂಪುಗಳು ತಯಾರಿಸಿದ ಕರಕುಶಲ ವಸ್ತುಗಳು ಹಾಗೂ ಗ್ರಾಮೀಣ ಆಹಾರ ಉತ್ಪನ್ನಗಳನ್ನು ಸಂಸದ ಈ. ತುಕಾರಾಮ್ ಅವರು ಸ್ಥಳದಲ್ಲಿಯೇ ಖರೀದಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ತಾವು ಸಿದ್ಧಪಡಿಸಿದ್ದ ಆಕರ್ಷಕ ಕರಕುಶಲ ವಸ್ತುಗಳು, ಉತ್ತರ ಕರ್ನಾಟಕದ ವಿಶೇಷ ಜೋಳದ ರೊಟ್ಟಿ ಹಾಗೂ ವಿವಿಧ ಬಗೆಯ ರುಚಿಕರ ಉಪ್ಪಿನಕಾಯಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು. ಈ ವೇಳೆ ಮಳಿಗೆಗಳಿಗೆ ಭೇಟಿ ನೀಡಿದ ಸಂಸದ ಈ. ತುಕಾರಾಮ್ ಅವರು, ಮಹಿಳೆಯರ ಕೌಶಲ್ಯ ಮತ್ತು ಸ್ವಾವಲಂಬಿ ಬದುಕಿನ ಪ್ರಯತ್ನವನ್ನು ಶ್ಲಾಘಿಸಿದರು. ಸ್ಥಳದಲ್ಲಿಯೇ ಹಣ ಪಾವತಿಸಿ ಜೋಳದ ರೊಟ್ಟಿ, ಉಪ್ಪಿನಕಾಯಿ ಹಾಗೂ ಕರಕುಶಲ ವಸ್ತುಗಳನ್ನು ಖರೀದಿಸುವ ಮೂಲಕ ಮಹಿಳಾ ಉದ್ಯಮಿಗಳಿಗೆ ನೇರವಾಗಿ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್.ಹೆಚ್.ಡಿ., ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande