ಪುರುಷರ ಮೇಲಿನ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ರಚಿಸಲು ಆಗ್ರಹ
ಪುರುಷರ ಮೇಲಿನ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ರಚಿಸಿ; ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಬೇಡಿ: ಸುರೇಶ್ ರಂಗೇಗೌಡ
Karnataka-Mens-Commission-Formation-Demand-Mens-Rights-Protection-Mandya


ಮಂಡ್ಯ, 19 ನವೆಂಬರ್ (ಹಿ.ಸ.):

ರಾಜ್ಯದಲ್ಲಿ ಪುರುಷರ ಮೇಲಿನ ದೌರ್ಜನ್ಯ, ಕಿರುಕುಳ ಹಾಗೂ ಶೋಷಣೆ ತಡೆಗಟ್ಟುವ ಉದ್ದೇಶದಿಂದ ಪುರುಷರ ಕಲ್ಯಾಣ ಮತ್ತು ರಕ್ಷಣಾ ಆಯೋಗವನ್ನು ಪ್ರತ್ಯೇಕವಾಗಿ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಮಹಿಳೆಯರ ರಕ್ಷಣೆಗೆ ವಿವಿಧ ಕಾನೂನುಗಳು ಹಾಗೂ ಆಯೋಗಗಳು ಕಾರ್ಯನಿರ್ವಹಿಸುತ್ತಿರುವಂತೆಯೇ, ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳಿಂದ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುತ್ತಿರುವ ಪುರುಷರ ರಕ್ಷಣೆಗೂ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಮಂಡ್ಯದಲ್ಲಿ ಮಾತನಾಡಿದ ಚಿಂತಕ ಸುರೇಶ್ ರಂಗೇಗೌಡ, ಪುರುಷರ ಮೇಲಿನ ದೌರ್ಜನ್ಯ ಪ್ರಕರಣಗಳು ಹಲವು ಕಡೆ ವರದಿಯಾಗುತ್ತಿವೆ. ಕೌಟುಂಬಿಕ ಕಲಹ, ಪತ್ನಿಯಿಂದ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ಮಾನಸಿಕವಾಗಿ ನೊಂದಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಮುಂದಾಗುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ ಎಂದು ಹೇಳಿದರು.

ಪತ್ನಿಯ ಕಿರುಕುಳ ತಾಳಲಾರದೆ ನ್ಯಾಯಾಧೀಶರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣ ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿದ ಅವರು, ಪುರುಷರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.

ದೌರ್ಜನ್ಯಕ್ಕೆ ಒಳಗಾದ ಪುರುಷರು ಧೈರ್ಯವಾಗಿ ದೂರು ನೀಡಬೇಕು. ಅಂತಹವರ ಪರವಾಗಿ ಕರ್ನಾಟಕ ರಾಜ್ಯ ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿ ನಿಂತು ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಿದೆ. ಪುರುಷರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ನಿರ್ಮಾಣವಾಗಬೇಕು. ಅಗತ್ಯ ಕಾನೂನು ತಿದ್ದುಪಡಿಗಳ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಪುರುಷರಿಗೂ ಸಮಾಜದಲ್ಲಿ ಗೌರವ ಮತ್ತು ಸೂಕ್ತ ರಕ್ಷಣೆ ದೊರೆಯಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ಕಾನೂನು ನೆರವು ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಆಯೋಗ ರಚನೆಗೆ ಮುಂದಾಗಬೇಕು ಎಂದು ಸುರೇಶ್ ರಂಗೇಗೌಡ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande