ಕೆಎಎಸ್ ನೇಮಕಾತಿ ಹಗರಣ: ಇಡಿ ತನಿಖೆ ತೀವ್ರ
KPSC ನೇಮಕಾತಿ ಹಗರಣದ ತನಿಖೆಯಲ್ಲಿ ಹೊಸ ಆರೋಪ ಕೇಳಿಬಂದಿದ್ದು, ತಮ್ಮ ಇಬ್ಬರು ಪುತ್ರಿಯರಿಗೆ KAS ಹುದ್ದೆ ಕೊಡಿಸಲು ಐಪಿಎಸ್ ಅಧಿಕಾರಿಯೊಬ್ಬರು ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ 2 ಕೋಟಿ ರೂ. ನೀಡಿದ್ದರು ಎಂದು ED ವಿಚಾರಣೆ ವೇಳೆ ಬಹಿರಂಗವಾಗಿದೆ ಎನ್ನಲಾಗಿದೆ. ಈ ಕುರಿತು ಇ.ಡಿ. ತನಿಖೆ ಚುರುಕುಗೊಂಡಿದೆ.
KPSC-Recruitment-Scam-IPS-Officer-Accused-of-Paying-2-Crore-for-Daughters-KAS-Posts


ಬೆಂಗಳೂರು, 19 ನವೆಂಬರ್ (ಹಿ.ಸ.):

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಇಬ್ಬರು ಪುತ್ರಿಯರಿಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹುದ್ದೆ ಕೊಡಿಸುವ ಉದ್ದೇಶದಿಂದ ಐಪಿಎಸ್ ಅಧಿಕಾರಿಯೊಬ್ಬರು ಮಧ್ಯವರ್ತಿಗೆ 2 ಕೋಟಿ ರೂ. ನೀಡಿದ್ದರು ಎಂಬ ಆರೋಪ ಬೆಳಕಿಗೆ ಬಂದಿದೆ.

ಹಗರಣದ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ಈ ಹಣದ ವ್ಯವಹಾರದ ಬಗ್ಗೆ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿದ್ದ ಅಮಾನತುಗೊಂಡ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯಂತೆ ಐಪಿಎಸ್ ಅಧಿಕಾರಿಯ ಮನೆಗೆ ತೆರಳಿ 2 ಕೋಟಿ ರೂ. ಸಂಗ್ರಹಿಸಿದ್ದಾಗಿ ಕನ್ನಾಳೆ ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.

ಐಪಿಎಸ್ ಅಧಿಕಾರಿಯ ಇಬ್ಬರು ಪುತ್ರಿಯರಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸಿ ಆಯ್ಕೆ ಖಚಿತಪಡಿಸುವ ಉದ್ದೇಶದಿಂದ ಹಣ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ ಒಬ್ಬರು ಸಂದರ್ಶನಕ್ಕೆ ಅರ್ಹತೆಯನ್ನೇ ಹೊಂದಿರಲಿಲ್ಲ ಎಂಬ ಗಂಭೀರ ಆರೋಪವೂ ಇದೆ.

ಸಂಗ್ರಹಿಸಿದ 2 ಕೋಟಿ ರೂ. ಹಣವನ್ನು ಅಂದಿನ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ತಲುಪಿಸಲಾಗಿತ್ತು ಎಂದು ಕನ್ನಾಳೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹಣದ ವಹಿವಾಟಿನ ಸ್ವರೂಪ ಮತ್ತು ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವವರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಸಿದೆ.

ಇದರ ಬೆನ್ನಲ್ಲೇ ಕೆಎಎಸ್ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಇ.ಡಿ. ಅಧಿಕಾರಿಗಳು ಮುಂದಾಗಿದ್ದಾರೆ.

ನೇಮಕಾತಿಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ, ಸಂದರ್ಶನಕ್ಕೆ ಅರ್ಹತೆ ಪಡೆದವರ ವಿವರ ಹಾಗೂ ಸಂದರ್ಶನ ಮಂಡಳಿಯ ಸದಸ್ಯರು ಅಭ್ಯರ್ಥಿಗಳಿಗೆ ನೀಡಿದ ಅಂಕಗಳ ಕುರಿತು ಕೆಪಿಎಸ್ಸಿಯಿಂದ ಮಾಹಿತಿ ಪಡೆಯಲು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಮಧ್ಯವರ್ತಿಯ ಹೇಳಿಕೆ ಆಧರಿಸಿ ತನಿಖೆ ಮುಂದುವರಿದಿದ್ದು, ಹಣದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಯಿಂದ ನೇಮಕಾತಿ ಹಗರಣದ ಮತ್ತಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande