ಹಸಿವಿಗೆ ಜಾತಿ, ಧರ್ಮದ ಭೇದವಿಲ್ಲ: ಡಿ.ಕೆ. ಶಿವಕುಮಾರ್
16 ನೂತನ ಇಂದಿರಾ ಕ್ಯಾಂಟೀನ್ಗಳಿಗೆ ವರ್ಚುವಲ್ ಚಾಲನೆ; ಆಹಾರದ ಗುಣಮಟ್ಟ ಪರಿಶೀಲನೆಗೆ ಶಾಸಕರಿಗೆ ಸೂಚನೆ
DK-Shivakumar-Inaugurates-16-New-Indira-Canteens-in-Karnataka-Emphasizes-Food-Quality-and-Affordable-Meals


ಬೆಂಗಳೂರು, 19 ನವೆಂಬರ್ (ಹಿ.ಸ.):

ಹಸಿವಿಗೆ ಜಾತಿ ಅಥವಾ ಧರ್ಮದ ಭೇದವಿಲ್ಲ. ಬಡವರ ತಟ್ಟೆಯಲ್ಲಿ ಊಟವಿದ್ದಾಗ ಮಾತ್ರ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಆರಂಭಿಸಲಾದ 16 ಇಂದಿರಾ ಕ್ಯಾಂಟೀನ್ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

“ಹಸಿವಿಗೆ ಜಾತಿ ಅಥವಾ ಧರ್ಮವಿದೆಯೇ? ಹಸಿವು ಎಂದಿಗೂ ತಾರತಮ್ಯ ಮಾಡುವುದಿಲ್ಲ. ಅತ್ಯಂತ ಶ್ರೀಮಂತ ವ್ಯಕ್ತಿಯೂ ಹಸಿದಾಗ ಊಟ ಮಾಡುವ ಮುನ್ನ ಎದುರಿನವರ ಜಾತಿ ಅಥವಾ ಧರ್ಮವನ್ನು ನೋಡುವುದಿಲ್ಲ. ಬಡವರ ತಟ್ಟೆಯಲ್ಲಿ ಊಟವಿದ್ದಾಗ ಮಾತ್ರ ಅಭಿವೃದ್ಧಿಗೆ ನಿಜವಾದ ಅರ್ಥ ಬರುತ್ತದೆ” ಎಂದು ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 'ಗರೀಬಿ ಹಟಾವೋ' ಘೋಷಣೆಯನ್ನು ಸ್ಮರಿಸಿದ ಅವರು, ಬಡವರಿಗೆ ಆಹಾರ ಮತ್ತು ಜೀವನೋಪಾಯದ ಸೌಲಭ್ಯಗಳನ್ನು ಒದಗಿಸುವುದು ಅವರ ಪ್ರಮುಖ ಆಶಯವಾಗಿತ್ತು. ಅವರ ಕನಸನ್ನು ಮುಂದುವರಿಸುವ ಉದ್ದೇಶದಿಂದಲೇ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಾಗಿದೆ ಎಂದರು.

ಇಂದಿರಾ ಕ್ಯಾಂಟೀನ್ಗಳಲ್ಲಿ ಕೇವಲ 5 ರೂಪಾಯಿಗೆ ಉಪಾಹಾರ ಹಾಗೂ 10 ರೂಪಾಯಿಗೆ ಊಟ ನೀಡಲಾಗುತ್ತಿದೆ. ದಿನಗೂಲಿ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ನಗರ ಪ್ರದೇಶಗಳ ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.

ರಾಜ್ಯದಲ್ಲಿ ಕ್ಯಾಂಟೀನ್ಗಳ ಸಂಖ್ಯೆಯನ್ನು 380ಕ್ಕೂ ಹೆಚ್ಚು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಬಾಕಿ ಉಳಿದಿರುವ ಕ್ಯಾಂಟೀನ್ಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್ಗಳ ಪರಿಕಲ್ಪನೆ ಕುರಿತು ಮಾತನಾಡಿದ ಅವರು, ತಮಿಳುನಾಡಿನ ಶ್ರೀಪೆರಂಬದೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಅಮ್ಮ ಕ್ಯಾಂಟೀನ್ನಲ್ಲಿ 5 ರೂಪಾಯಿಗೆ ಇಡ್ಲಿ ಮತ್ತು ಪೊಂಗಲ್ ಸೇವಿಸಿದ್ದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಕಂಡು ಕರ್ನಾಟಕದಲ್ಲಿಯೂ ಇಂತಹ ಯೋಜನೆ ಜಾರಿಗೆ ತರಬೇಕು ಎಂಬ ಆಲೋಚನೆ ಮೂಡಿತು.

ಈ ಕುರಿತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರೊಂದಿಗೆ ಚರ್ಚಿಸಲಾಗಿತ್ತು. ಶಾಸಕರ ಸಲಹೆಯಂತೆ ಇಂದಿರಾ ಗಾಂಧಿ ಅವರ ಹೆಸರನ್ನು ಈ ಯೋಜನೆಗೆ ಇಡಲಾಯಿತು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರಗಳು ಬಡವರು ಮತ್ತು ದುರ್ಬಲ ವರ್ಗದವರ ಪರವಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರದ ಹಕ್ಕು ಕಾಯ್ದೆ ಜಾರಿಗೊಳಿಸಲಾಯಿತು.

ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ಬಂದಿತು. ಸಿದ್ದರಾಮಯ್ಯ ಅವದಿಯಲ್ಲಿ ಸರ್ಕಾರ ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕೆ ಆದ್ಯತೆ ಜಾರಿ ಮಾಡಿತು ಎಂದರು.

ಆಹಾರದ ಗುಣಮಟ್ಟದಲ್ಲಿ ರಾಜಿ ಇಲ್ಲ

ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟ ಕಾಪಾಡುವಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲ ಶಾಸಕರು ತಿಂಗಳಿಗೊಮ್ಮೆ ತಮ್ಮ ಕ್ಷೇತ್ರದ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಕ್ಯಾಂಟೀನ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ದೃಶ್ಯಾವಳಿಗಳನ್ನು ಕೇಂದ್ರ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಕ್ಯಾಂಟೀನ್ಗೆ ಎಷ್ಟು ಜನರು ಬರುತ್ತಿದ್ದಾರೆ, ಎಷ್ಟು ಆಹಾರ ತಯಾರಿಸಲಾಗುತ್ತಿದೆ ಮತ್ತು ಎಷ್ಟು ಆಹಾರ ವಿತರಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದಿಷ್ಟ ಕ್ಯಾಂಟೀನ್ಗಳ ಜವಾಬ್ದಾರಿ ವಹಿಸಬೇಕು. ಅಧಿಕಾರಿಗಳು ನಿಯಮಿತವಾಗಿ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿ ಆಹಾರ ಮತ್ತು ಸೇವೆಯ ಗುಣಮಟ್ಟವನ್ನು ಪರಿಶೀಲಿಸಬೇಕು. ಗುತ್ತಿಗೆದಾರರನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಸೂಚಿಸಿದರು.

“ಆಹಾರದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಚುನಾಯಿತ ಪ್ರತಿನಿಧಿಗಳ ಸೂಚನೆಯ ಮೇರೆಗೆ ಲೋಪಗಳು ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಬೆಲೆಗಳು ಏರಿಕೆಯಾಗುತ್ತಿದ್ದು, ಜನರ ಆದಾಯದ ಮೇಲೆ ಒತ್ತಡ ಹೆಚ್ಚಾಗಿದೆ. ಹಸಿವನ್ನು ನೀಗಿಸುವುದರ ಜತೆಗೆ ಪ್ರತಿಯೊಬ್ಬರಿಗೂ ಆಹಾರದ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಕಷ್ಟಪಟ್ಟು ದುಡಿಯುವ ಜನರ ಮುಖದಲ್ಲಿ ಸದಾ ನಗು ಇರಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande