
ಬಾಗಲಕೋಟೆ, 19 ನವೆಂಬರ್ (ಹಿ.ಸ.)
ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಜಮಖಂಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಹಂಗಾಮಿನ ಮೊದಲನೇ ಸಕ್ಕರೆ ಚೀಲವನ್ನು ನಾಗನೂರು ಗ್ರಾಮದ ಬಾರಾಖುದಾ ದರ್ಗಾಕ್ಕೆ ಸಮರ್ಪಿಸಲಾಯಿತು.
ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಕಾರ್ಖಾನೆಯ ಮೊದಲನೇ ಸಕ್ಕರೆ ಚೀಲವನ್ನು ದರ್ಗಾಕ್ಕೆ ಭಕ್ತಿಪೂರ್ವಕವಾಗಿ ಅರ್ಪಿಸಿದರು. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸುವ ಮೂಲಕ ಧಾರ್ಮಿಕ ಸೌಹಾರ್ದತೆ ಹಾಗೂ ಪರಂಪರೆಗೆ ಗೌರವ ಸಲ್ಲಿಸಲಾಯಿತು.
ಜಮಖಂಡಿ ಸಕ್ಕರೆ ಕಾರ್ಖಾನೆಯ ಉತ್ಪಾದನಾ ಕಾರ್ಯ ಆರಂಭದ ಸಂದರ್ಭದಲ್ಲಿ ಮೊದಲನೇ ಸಕ್ಕರೆ ಚೀಲವನ್ನು ದರ್ಗಾಕ್ಕೆ ನೀಡುವುದು ವಿಶೇಷ ಮಹತ್ವ ಹೊಂದಿದೆ. ಕಾರ್ಖಾನೆಯ ಪ್ರಗತಿ, ರೈತರ ಸಮೃದ್ಧಿ ಹಾಗೂ ಈ ಭಾಗದ ಜನರ ಸುಖ-ಶಾಂತಿಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯವರು ಹಾಗೂ ಆಡಳಿತ ವರ್ಗದವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande