ಬಸವಣ್ಣನವರ ವಿರುದ್ಧ ಅವಹೇಳನಕಾರಿ ಬರಹ: ರವಿ ಹಂಜ್ ವಿರುದ್ಧ ಕಾನೂನು ಕ್ರಮ ಎಂ.ಬಿ.ಪಾಟೀಲ
ಬೆಂಗಳೂರು, 19 ನವೆಂಬರ್ (ಹಿ.ಸ.): ವಿಶ್ವಗುರು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ಪುಸ್ತಕ ಪ್ರಕಟಿಸಿ, ವಿಡಿಯೋಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ಅಮೆರಿಕ ಮೂಲದ ಲೇಖಕ ರವಿ ಹಂಜ್ ವಿರುದ್ಧ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಪರ ಚಿಂತಕರು ತೀವ್ರ
ಜಂಟಿ ಸುದ್ದಿಗೋಷ್ಠಿ ಪೋಟೋ


ಬೆಂಗಳೂರು, 19 ನವೆಂಬರ್ (ಹಿ.ಸ.):

ವಿಶ್ವಗುರು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ಪುಸ್ತಕ ಪ್ರಕಟಿಸಿ, ವಿಡಿಯೋಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ಅಮೆರಿಕ ಮೂಲದ ಲೇಖಕ ರವಿ ಹಂಜ್ ವಿರುದ್ಧ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ಬಸವಪರ ಚಿಂತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬಸವ ಸಮಿತಿ ಕಚೇರಿಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ.ಆರ್. ಪಾಟೀಲ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಡಾ. ನೀರಜ್ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಜಂಟಿ ಸುದ್ದಿಗೋಷ್ಠಿ ನಡೆಸಿ, ಲೇಖನ ಹಾಗೂ ವಿಡಿಯೋಗಳಲ್ಲಿನ ಹೇಳಿಕೆಗಳನ್ನು ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಜಗತ್ತಿಗೆ ಸಮಾನತೆಯ ಸಂದೇಶ ಹಾಗೂ ಅನುಭವ ಮಂಟಪದ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರು ಮಹಿಳಾ ಸಬಲೀಕರಣ ಮತ್ತು ಮೂಢನಂಬಿಕೆಗಳ ನಿವಾರಣೆಗಾಗಿ ಹೋರಾಡಿದ ಮಹಾನ್ ಚೇತನ. ಅಂತಹ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಹಾಗೂ ಲೂಟಿಕೋರ ಎಂಬಂತೆ ಬಿಂಬಿಸಿ ಲೇಖನ ಮತ್ತು ಪುಸ್ತಕ ಬರೆಯಲಾಗಿದೆ. ಇಂತಹ ಪದಗಳನ್ನು ಬಳಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವಿ ಹಂಜ್ ಅವರಿಂದ ಇಂತಹ ಬರಹಗಳನ್ನು ಯಾರು ಬರೆಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಉಲ್ಲೇಖಗಳಿವೆ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿಯೂ ಸ್ವಾಮೀಜಿಗಳು, ಚಿಂತಕರು ಮತ್ತು ಇತಿಹಾಸಕಾರರಿದ್ದು, ಈ ಎಲ್ಲ ವಿಚಾರಗಳನ್ನು ಪರಿಶೀಲಿಸಲಾಗುವುದು ಎಂದರು.

ನಾವು ಸೌಮ್ಯ ಸ್ವಭಾವದವರು, ಸಂಘರ್ಷಕ್ಕೆ ಮುಂದಾಗುವವರಲ್ಲ. ಆದರೆ, ಬಸವ ಧರ್ಮ ಮತ್ತು ವಚನ ಸಾಹಿತ್ಯದ ಮೇಲೆ ಇಂತಹ ದಾಳಿಗಳು ಮುಂದುವರಿದರೆ ಸುಮ್ಮನಿರುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande