ಫ್ರೀಡಂ ಪಾರ್ಕ್ ನಲ್ಲಿ ಮುಂದುವರೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮೂರನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ | ನಾಗಲಕ್ಷ್ಮಿ ಚೌದರಿ ಎದುರೇ ಅಳಲು ತೋಡಿಕೊಂಡ ಕಾರ್ಯಕರ್ತೆಯರು | ಇಬ್ಬರು ಅಸ್ವಸ್ಥ, ಮಕ್ಕಳಿಗೂ ಜ್ವರ
ASHA-WORKERS-PROTEST-ENTERS-THIRD-DAY-IN-BENGALURU-WOMEN-_BREAK-DOWN-IN-TEARS


ಬೆಂಗಳೂರು, 19 ನವೆಂಬರ್ (ಹಿ.ಸ.):

ಮಾಸಿಕ 15 ಸಾವಿರ ರೂ. ನಿಗದಿತ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಸರ್ಕಾರ ಈ ಹಿಂದೆ ನೀಡಿದ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿ ಯಾವುದೇ ಮೌಖಿಕ ಭರವಸೆಗಳಿಗೆ ಬಗ್ಗುವುದಿಲ್ಲ.

ಮುಖ್ಯಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳ ಈಡೇರಿಕೆಯ ಕುರಿತು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾಗಲಕ್ಷ್ಮಿ ಚೌದರಿ ಎದುರೇ ಕಣ್ಣೀರಿಟ್ಟ ಕಾರ್ಯಕರ್ತೆಯರು

ಪ್ರತಿಭಟನಾ ಸ್ಥಳದಲ್ಲಿ ನಡೆದ ಕಾರ್ಯಕ್ರಮದ ವೇಳೆ ಆಶಾ ಕಾರ್ಯಕರ್ತೆಯರು ತಮ್ಮ ಸಂಕಷ್ಟಗಳನ್ನು ವಿವರಿಸುವಾಗ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ನಾಗಲಕ್ಷ್ಮಿ ಚೌದರಿ ಅವರ ಎದುರೇ ಮಹಿಳೆಯರು ತಮ್ಮ ನೋವು ತೋಡಿಕೊಂಡಿದ್ದಾರೆ.

'ನಮ್ಮ ಕಣ್ಣೀರು ಯಾರಿಗೂ ಕಾಣಿಸುತ್ತಿಲ್ಲವೇ? ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲವೇ?' ಎಂದು ಪ್ರಶ್ನಿಸುತ್ತಾ ಕಾರ್ಯಕರ್ತೆಯರು ವೇದಿಕೆಯ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ತಮ್ಮ ಕುಟುಂಬದ ನಿರ್ವಹಣೆ, ಕೆಲಸದ ಒತ್ತಡ ಹಾಗೂ ಗೌರವಧನದ ಸಮಸ್ಯೆಗಳನ್ನು ವಿವರಿಸುವಾಗ ಪ್ರತಿಭಟನಾ ವೇದಿಕೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.

ಇಬ್ಬರು ಅಸ್ವಸ್ಥ, ಮಕ್ಕಳಿಗೂ ಜ್ವರ

ನಿರಂತರ ಪ್ರತಿಭಟನೆ, ನಿದ್ರೆಯ ಕೊರತೆ ಹಾಗೂ ಬಳಲಿಕೆಯಿಂದ ಇಬ್ಬರು ಆಶಾ ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ದೀಪಾ ಎಂಬ ಕಾರ್ಯಕರ್ತೆಯನ್ನು ಪೊಲೀಸ್ ವಾಹನದಲ್ಲಿ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಬ್ಬ ಕಾರ್ಯಕರ್ತೆಗೆ ತೀವ್ರ ಶೀತ ಹಾಗೂ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಇನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತೆಯರೊಂದಿಗೆ ಬಂದಿದ್ದ ಮೂವರು ಮಕ್ಕಳಿಗೂ ಜ್ವರ ಕಾಣಿಸಿಕೊಂಡಿದೆ. ಧೂಳು ಮತ್ತು ಚಳಿಯ ವಾತಾವರಣದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕಾರ್ಯಕರ್ತೆಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಆಶಾ ಕಾರ್ಯಕರ್ತೆಯರ ಧರಣಿಯತ್ತ ಗಮನಹರಿಸುವ ಸೌಜನ್ಯವನ್ನೂ ಸರ್ಕಾರ ತೋರಿಲ್ಲ ಎಂದು ಟೀಕಿಸಿದ್ದಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರೋಗ್ಯ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸಂಬಂಧಪಟ್ಟ ಸಚಿವರು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ತಾಯಂದಿರು ತಮ್ಮ ಪುಟ್ಟ ಮಕ್ಕಳೊಂದಿಗೆ ಚಳಿಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮೌನವಾಗಿರುವುದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ, ಮಾಸಿಕ 15 ಸಾವಿರ ರೂ. ಗೌರವಧನದ ಬೇಡಿಕೆ ಮುಂದಿಟ್ಟುಕೊಂಡು ನವೆಂಬರ್ 17ರಂದು ಆರಂಭವಾದ ಆಶಾ ಕಾರ್ಯಕರ್ತೆಯರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಕಾರ್ಯಕರ್ತೆಯರು, ಲಿಖಿತ ಭರವಸೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ದೃಢ ನಿಲುವು ತಳೆದಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande