ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಬೆಂಬಲಿಸಿ, ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
asha-protest-nikhil-kumaraswamy


ಬೆಂಗಳೂರು, 18 ನವೆಂಬರ್ (ಹಿ.ಸ.):

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು,

ಕೊರೆಯುವ ಚಳಿಯಲ್ಲಿ ಹಸುಗೂಸುಗಳೊಂದಿಗೆ ಮಲಗಿರುವ ತಾಯಂದಿರ ಕಣ್ಣೀರು ರಾಜ್ಯದ ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದಂತಹ ಸಂಕಷ್ಟದ ಕಾಲದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದವರು ಈ ಆಶಾ ಕಾರ್ಯಕರ್ತೆಯರು. ಆದರೆ, ಇಂದು ಅದೇ ತಾಯಂದಿರು ಫ್ರೀಡಂ ಪಾರ್ಕ್ನ ಕೊರೆಯುವ ಚಳಿಯಲ್ಲಿ ಬೀದಿಯಲ್ಲೇ ಮಲಗುವಂತಹ ದುಸ್ಥಿತಿ ಬಂದೊದಗಿದೆ.

ರಾಜ್ಯದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಅವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ತಿಂಗಳಿಗೆ ಕನಿಷ್ಠ 15,000 ರೂಪಾಯಿಗಳ ಗೌರವಧನ ನಿಗದಿಪಡಿಸಬೇಕು ಎನ್ನುವುದು ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ತಾಯಂದಿರು ಚಳಿಯನ್ನೂ ಲೆಕ್ಕಿಸದೆ ಹೋರಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಈ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತನ್ನದೇ 2023ರ ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಮರೆತು ಮಾತು ತಪ್ಪಿರುವುದೇ ಪ್ರಮುಖ ಕಾರಣ ಎಂದು ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.

ಪ್ರಣಾಳಿಕೆಯ ಭರವಸೆಗಳನ್ನು ಪುಟ ಸಹಿತ ನೆನಪಿಸಿರುವ ಅವರು, 8,000 ರೂಪಾಯಿಗಳವರೆಗೆ ನಿಗದಿತ ಮಾಸಿಕ ಗೌರವಧನ ನೀಡುವುದಾಗಿ ಹೇಳಿದ್ದ ಸರ್ಕಾರ, ಇಂದಿಗೂ 5,000 ರೂಪಾಯಿಗಳನ್ನೇ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಶೇ. 50ರಷ್ಟು ಸಬ್ಸಿಡಿ ನೀಡುವ ಭರವಸೆಯನ್ನೂ ಸಂಪೂರ್ಣವಾಗಿ ಮರೆತಿದೆ.

ಇನ್ನು, ಅಂಗನವಾಡಿ ಕಾರ್ಯಕರ್ತೆಯರಿಗೆ 3 ಲಕ್ಷ ರೂಪಾಯಿಗಳ ನಿವೃತ್ತಿ ಪರಿಹಾರ ಘೋಷಿಸಿರುವ ಸರ್ಕಾರ, ಆಶಾ ಕಾರ್ಯಕರ್ತೆಯರನ್ನು ಮಾತ್ರ ಬರಿಗೈಯಲ್ಲಿ ನಿವೃತ್ತರಾಗುವಂತೆ ಮಾಡಿ ಕೈಬಿಟ್ಟಿದೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳು ಸ್ಕೂಟರ್ ಸಬ್ಸಿಡಿ ನೀಡುವುದು ಇರಲಿ, ಮೊದಲು ಈ ತಾಯಂದಿರಿಗೆ ಗೌರವಯುತವಾಗಿ ಬದುಕಲು 15,000 ರೂ.ಗಳ ಗೌರವಧನ ನೀಡಬೇಕು. ಇದರ ಜೊತೆಗೆ, ಅವರಿಗೆ ಸಲ್ಲಬೇಕಾದ 5 ಲಕ್ಷ ರೂಪಾಯಿಗಳ ನಿವೃತ್ತಿ ಪರಿಹಾರವನ್ನು ತಕ್ಷಣವೇ ಮಂಜೂರು ಮಾಡಬೇಕು.

ಜನರಿಗೆ ನೀಡಿದ ಮಾತನ್ನು ತಪ್ಪುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರವನ್ನು ಮುಕ್ತಕಂಠದಿಂದ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande