
ಬಾಗಲಕೋಟೆ, 18 ನವೆಂಬರ್ (ಹಿ.ಸ.)
ಕೂಡಲಸಂಗಮದಿಂದ ಆರಂಭಗೊಂಡಿರುವ ಅಹಿಂದಾ ಆಕ್ರೋಶ ಯಾತ್ರೆ ಮುಧೋಳ ನಗರಕ್ಕೆ ಆಗಮಿಸಿದ್ದು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಹಿಂದ ಸಮುದಾಯದ ಮುಖಂಡರು ಯಾತ್ರೆಗೆ ಬೆಂಬಲ ಸೂಚಿಸಿದರು.
ಈ ಕುರಿತು ಮಾತನಾಡಿದ ಅಹಿಂದ ಮುಖಂಡ ಪಂಚಪ್ಪ ಹೊಸಮನಿ ಅವರು, ಅಹಿಂದ ಸಮುದಾಯದ ಹಕ್ಕುಗಳು, ಸಾಮಾಜಿಕ ನ್ಯಾಯ ಹಾಗೂ ಸಮುದಾಯದ ವಿವಿಧ ಬೇಡಿಕೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕೂಡಲಸಂಗಮದಿಂದ ಅಹಿಂದಾ ಆಕ್ರೋಶ ಯಾತ್ರೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಯಾತ್ರೆಯು ಮುಧೋಳ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಮುದಾಯದ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದು, ಯಾತ್ರೆಯ ಉದ್ದೇಶಕ್ಕೆ ಸಹಮತ ಸೂಚಿಸಿದ್ದಾರೆ ಎಂದರು.
ಕೂಡಲಸಂಗಮದಿಂದ ಆರಂಭಗೊಂಡಿರುವ ಈ ಯಾತ್ರೆಯು ನಾಡಿನ ಐತಿಹಾಸಿಕ ಹಾಗೂ ಕ್ರಾಂತಿಕಾರಿ ನೆಲವಾದ ಸಂಗೊಳ್ಳಿ ರಾಯಣ್ಣನವರ ಕ್ರಾಂತಿಭೂಮಿ ನಂದಗಡದವರೆಗೆ ಸಂಚರಿಸಲಿದೆ. ಅಲ್ಲಿ ಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಪಂಚಪ್ಪ ಹೊಸಮನಿ ತಿಳಿಸಿದರು.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಈ ಯಾತ್ರೆಗೆ ವಿವಿಧ ಭಾಗಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ಮುಧೋಳದಲ್ಲಿಯೂ ಮುಖಂಡರು ಯಾತ್ರೆಗೆ ಸಹಕಾರ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande