
ವಿಜಯಪುರ, 18 ನವೆಂಬರ್ (ಹಿ.ಸ.)
ರಾಜಕೀಯ ಅಧಿಕಾರದ ಆಸೆಗಾಗಿ ಭಾರತದ ಘನತೆ, ಸಾರ್ವಭೌಮತೆ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ವಿದೇಶಿ ವೇದಿಕೆಗಳಲ್ಲಿ ಪ್ರಶ್ನಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಖಂಡನೀಯವಾಗಿದೆ. ಮಾತೃಭೂಮಿಯ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗಳ ಮೂಲಕ ದೇಶದ ಪ್ರತಿಷ್ಠೆಗೆ ಅಪಮಾನ ಮಾಡಿರುವ ರಾಹುಲ್ ಗಾಂಧಿ ಅವರು ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ರಾಘವ್ ಅಣ್ಣಿಗೇರಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿದೇಶಿ ವ್ಯಕ್ತಿಯ ಬಾಯಿಯಿಂದ 'ವೋಟ್ ಚೋರ್, ಗದ್ದಿ ಛೋಡ್' ಎಂಬ ಘೋಷಣೆ ಮೊಳಗಿಸುವ ಮೂಲಕ ಭಾರತದ ಆಂತರಿಕ ರಾಜಕೀಯ ವಿಚಾರಗಳನ್ನು ವಿದೇಶಿ ವೇದಿಕೆಗೆ ಕೊಂಡೊಯ್ದಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ಕೇವಲ ಅಧಿಕಾರದ ಹಪಾಹಪಿಗಾಗಿ ಭಾರತದ ಘನತೆ, ಸಾರ್ವಭೌಮತೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ವಿದೇಶಿ ವೇದಿಕೆಗಳಲ್ಲಿ ಪ್ರಶ್ನಿಸುವ ಕಾಂಗ್ರೆಸ್ ಮನಸ್ಥಿತಿ ನಿಜಕ್ಕೂ ಖಂಡನೀಯ. ರಾಜಕೀಯ ವಿರೋಧ ಮತ್ತು ಟೀಕೆಗಳು ಪ್ರಜಾಪ್ರಭುತ್ವದ ಸಹಜ ಭಾಗವಾಗಿದ್ದರೂ, ದೇಶದ ಗೌರವವನ್ನು ರಾಜಕೀಯ ಲಾಭ-ನಷ್ಟಗಳೊಂದಿಗೆ ಸಮೀಕರಿಸುವುದು ಸರಿಯಲ್ಲ. 'ವಿನಾಶಕಾಲೇ ವಿಪರೀತ ಬುದ್ಧಿ' ಎಂಬ ಮಾತು ಇಂತಹ ರಾಜಕೀಯ ನಿಲುವುಗಳಿಗೆ ಅನ್ವಯಿಸುವಂತಿದೆ ಎಂದು ಟೀಕಿಸಿದ್ದಾರೆ.
ಪ್ರಜಾಸತ್ತಾತ್ಮಕ ಸಂಸ್ಥೆಗಳ ಗೌರವಕ್ಕೆ ಧಕ್ಕೆ ತರಬಾರದು
ಅಕ್ರಮ ನುಸುಳುಕೋರರು ಹಾಗೂ ನಕಲಿ ಮತದಾರರ ವಿರುದ್ಧ ಕೈಗೊಳ್ಳುವ ಕ್ರಮಗಳ ಕುರಿತು ರಾಜಕೀಯ ಅಸಮಾಧಾನ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಆದರೆ ಆ ವಿಚಾರವನ್ನು ಮುಂದಿಟ್ಟುಕೊಂಡು ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಪ್ರಯತ್ನ ಮಾಡುವುದು ಎಷ್ಟು ಸಮಂಜಸ ಎಂಬುದನ್ನು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಶದೊಳಗೆ ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾದವರು ತಮ್ಮ ರಾಜಕೀಯ ಹೋರಾಟವನ್ನು ವಿದೇಶಿ ವೇದಿಕೆಗಳಿಗೆ ಕೊಂಡೊಯ್ಯುವುದು ಮತ್ತು ಭಾರತದ ಆಂತರಿಕ ವಿಚಾರಗಳಲ್ಲಿ ಹೊರಗಿನ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುವ ರೀತಿಯಲ್ಲಿ ನಡೆದುಕೊಳ್ಳುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಗೌರವ ರಾಜಕೀಯಕ್ಕಿಂತ ದೊಡ್ಡದು
ರಾಹುಲ್ ಗಾಂಧಿಯವರೇ, ರಾಜಕೀಯ ವಿರೋಧವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ ಭಾರತದ ಗೌರವ ಮತ್ತು ಸಾರ್ವಭೌಮತೆ ಯಾವುದೇ ರಾಜಕೀಯ ಪಕ್ಷದ ಲಾಭ-ನಷ್ಟಗಳಿಗಿಂತ ಬಹಳ ದೊಡ್ಡದು ಎಂಬುದನ್ನು ಮರೆಯಬಾರದು.
ಸರ್ಕಾರವನ್ನು ಟೀಕಿಸುವ ಹಕ್ಕಿನಂತೆಯೇ ದೇಶದ ಘನತೆಗೆ ಧಕ್ಕೆ ತರುವ ಹೇಳಿಕೆಗಳ ಕುರಿತು ಜನರ ಮುಂದೆ ಸ್ಪಷ್ಟನೆ ನೀಡುವ ಜವಾಬ್ದಾರಿಯೂ ರಾಜಕೀಯ ನಾಯಕರ ಮೇಲಿದೆ. ಆದ್ದರಿಂದ ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ, ದೇಶದ ಜನತೆಯ ಕ್ಷಮೆಯಾಚಿಸಬೇಕು. ಮಾತೃಭೂಮಿಯ ಗೌರವಕ್ಕೆ ಅಪಮಾನ ಮಾಡುವುದನ್ನು ದೇಶದ ಜನತೆ ಸಹಿಸುವುದಿಲ್ಲ ಎಂದು ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande