ಚಡಚಣ:ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಬಳಿ ಹಲವು ಜಾನುವಾರುಗಳ ಮೇಲೆ ದಾಳಿ ನಡೆಸಿ ರೈತರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಸೆರೆಯಿಂದ ಸ್ಥಳೀಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
Leopard-Captured-Near-Taddevadi-Village-in-Vijayapura-Chadachana


ವಿಜಯಪುರ, 18 ನವೆಂಬರ್ (ಹಿ.ಸ.):

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ತದ್ದೇವಾಡಿ, ಮಾಣಂಕಲಗಿ ಅಡವಿವಸ್ತಿ, ಮರಗೂರ ಅಡವಿವಸ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿತ್ತು.

ಮುಳ್ಳುಕಂಟಿ ಹಾಗೂ ಕಬ್ಬಿನ ಗದ್ದೆಗಳಲ್ಲಿ ಅಡಗಿ ಕುಳಿತಿದ್ದ ಚಿರತೆ, ಕಳೆದ ಒಂದು ತಿಂಗಳಿನಿಂದ ಹಲವು ಎಮ್ಮೆ ಕರು ಹಾಗೂ ಆಕಳ ಕರುಗಳನ್ನು ಬಲಿ ಪಡೆದಿತ್ತು. ಇದರಿಂದಾಗಿ ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೊಳಗಾಗಿದ್ದರು.

ಚಿರತೆಯನ್ನು ಸೆರೆ ಹಿಡಿಯುವ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಬೋನ್ ಇರಿಸಿದ್ದರು. ನಿನ್ನೆ ಮಲಕಣ್ಣ ಬಿರಾದಾರ ಎಂಬುವವರಿಗೆ ಸೇರಿದ ಎಮ್ಮೆ ಕರುವನ್ನು ಚಿರತೆ ಅರ್ಧಂಬರ್ಧ ತಿಂದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕರುವನ್ನು ತಿಂದ ಸ್ಥಳದಲ್ಲಿಯೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಅಳವಡಿಸಿದ್ದರು.

ಇಂದು ಮತ್ತೆ ಎಮ್ಮೆ ಕರು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.

ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಶಿವರುದ್ರಪ್ಪ ಕಬಾಡಗಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ ಅವರ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೇ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇನ್ನು ಸ್ಥಳಕ್ಕೆ ಚಡಚಣ ತಹಶೀಲ್ದಾರ್ ಎಸ್.ಎಂ. ಇಂಗಳೆ ಭೇಟಿ ನೀಡಿದ್ದು, ಚಿರತೆ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಚಿರತೆ ಸೆರೆ ಸಿಕ್ಕಿರುವುದರಿಂದ ಕಳೆದ ಹಲವು ದಿನಗಳಿಂದ ಆತಂಕದಲ್ಲಿದ್ದ ಚಡಚಣ ತಾಲೂಕಿನ ರೈತರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಸೆರೆಯಾಗಿರುವುದು ಸ್ಥಳೀಯರಲ್ಲಿ ಸಮಾಧಾನ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande