ಬೆಂಗಳೂರು: ಜಕ್ಕೂರು ರೈಲ್ವೆ ಮೇಲ್ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತ
15 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಬೆಂಗಳೂರಿನ 26.16 ಕೋಟಿ ರೂ. ವೆಚ್ಚದ ಜಕ್ಕೂರು ರೈಲ್ವೆ ಮೇಲ್ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. 443 ಮೀಟರ್ ಉದ್ದದ ನಾಲ್ಕು ಪಥಗಳ ಮೇಲ್ಸೇತುವೆಯಿಂದ ವಾಹನ ಸವಾರರಿಗೆ ಪ್ರಯಾಣದ ದೂರ ಹಾಗೂ ಸಮಯ ಉಳಿತಾಯವಾಗಲಿದೆ.
Jakkur-Railway-Overbridge-Opened-To-Public-After-15-Years-Bengaluru


ಬೆಂಗಳೂರು, 18 ನವೆಂಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನ ವಾಹನ ಸವಾರರು ಬಹುದಿನಗಳಿಂದ ಕಾಯುತ್ತಿದ್ದ ಜಕ್ಕೂರು ರೈಲ್ವೆ ಮೇಲ್ಸೇತುವೆ ಕೊನೆಗೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.

ಬರೋಬ್ಬರಿ 15 ವರ್ಷಗಳ ಬಳಿಕ 26.16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮೇಲ್ಸೇತುವೆ ಉದ್ಘಾಟನೆಗೊಂಡಿದ್ದು, ಈ ಭಾಗದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

ಒಟ್ಟು 443 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 2011ರಲ್ಲಿ ಆರಂಭವಾಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಅಡೆತಡೆಗಳಿಂದಾಗಿ ಕಾಮಗಾರಿ ಹಲವು ವರ್ಷಗಳ ಕಾಲ ವಿಳಂಬವಾಗಿತ್ತು.

2024ರಲ್ಲಿ ಸ್ಥಳೀಯ ಸಂಸ್ಥೆಯು ಭೂಸ್ವಾಧೀನ ಪ್ರಕ್ರಿಯೆ ಹಾಗೂ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾದ ಬಳಿಕ ನಿರ್ಮಾಣ ಕಾರ್ಯಕ್ಕೆ ಮತ್ತೆ ವೇಗ ದೊರೆಯಿತು.

ಅಂತಿಮವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಈ ವರ್ಷ ಯೋಜನೆಯನ್ನು ಪೂರ್ಣಗೊಳಿಸಿದೆ.

ಮೇಲ್ಸೇತುವೆಯಲ್ಲಿ ಕಾಂಪೋಸಿಟ್ ಸ್ಟೀಲ್ ಗರ್ಡರ್ಗಳು ಹಾಗೂ ಬಲವರ್ಧಿತ ಮಣ್ಣಿನ ಗೋಡೆಗಳನ್ನು ನಿರ್ಮಿಸಲಾಗಿದೆ. ನಾಲ್ಕು ಪಥಗಳ ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿರುವ ಈ ಮೇಲ್ಸೇತುವೆಯಿಂದ ವಾಹನ ಸವಾರರು ರೈಲ್ವೆ ಕ್ರಾಸಿಂಗ್ನಲ್ಲಿ ಕಾಯುವ ಸಮಸ್ಯೆಯಿಂದ ಮುಕ್ತರಾಗಲಿದ್ದಾರೆ.

ಮುಖ್ಯವಾಗಿ ಥಣಿಸಂದ್ರ, ಹೆಬ್ಬಾಳ, ಕೊಗಿಲು, ಯಲಹಂಕ ಹಾಗೂ ಬಳ್ಳಾರಿ ರಸ್ತೆ (ವಿಮಾನ ನಿಲ್ದಾಣ ರಸ್ತೆ) ಕಡೆಗೆ ಸಂಚರಿಸುವವರಿಗೆ ಈ ಮೇಲ್ಸೇತುವೆ ಅನುಕೂಲವಾಗಲಿದೆ. ಇದರಿಂದ ಪ್ರಯಾಣದ ದೂರದಲ್ಲಿ ಸುಮಾರು 3 ಕಿ.ಮೀ. ಹಾಗೂ ಪ್ರಯಾಣದ ಸಮಯದಲ್ಲಿ 15 ನಿಮಿಷಗಳವರೆಗೆ ಉಳಿತಾಯವಾಗುವ ನಿರೀಕ್ಷೆಯಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಭೂಸ್ವಾಧೀನ ಮತ್ತು ಸಮನ್ವಯದ ಹಲವು ಸವಾಲುಗಳನ್ನು ವರ್ಷಗಳ ಕಾಲ ಎದುರಿಸಿ ಪರಿಹರಿಸಿದ ಬಳಿಕ ಜಕ್ಕೂರು ರೈಲ್ವೆ ಮೇಲ್ಸೇತುವೆ ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ನಿರಂತರ ಪ್ರಯತ್ನ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಫಲವಾಗಿ ಬಹುಕಾಲದಿಂದ ನಿರೀಕ್ಷಿಸಲಾಗಿದ್ದ ಮೂಲಸೌಕರ್ಯ ಯೋಜನೆ ಸಾಕಾರಗೊಂಡಿದೆ.

ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಸುಧಾರಿತ ಬೆಂಗಳೂರು ನಿರ್ಮಾಣದತ್ತ ಇದೊಂದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande