ಅಧಿವೇಶನ ವೆಚ್ಚದ ಲೆಕ್ಕವಲ್ಲ, ಉತ್ತರ ಕರ್ನಾಟಕದ ಅಭಿವೃದ್ಧಿಯ ಲೆಕ್ಕ ಕೊಡಲಿ:ಝಳಕಿ
ವಿಜಯಪುರ, 18 ನವೆಂಬರ್ (ಹಿ.ಸ.) ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಕೇವಲ ನಾಮಕಾವಸ್ಥೆಗೆ ನಡೆಯದೆ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ವೇಗ ನೀಡುವ ಮಹತ್ವದ ವೇದಿಕೆಯಾಗಬೇಕು. ಈ ಭಾಗದ ಜನರು ದಶಕಗಳಿಂದ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್
ಬೆಳಗಾವಿ ಅಧಿವೇಶನ ಅಭಿವೃದ್ಧಿ ಪರ ಇರಲಿ


ವಿಜಯಪುರ, 18 ನವೆಂಬರ್ (ಹಿ.ಸ.)

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಕೇವಲ ನಾಮಕಾವಸ್ಥೆಗೆ ನಡೆಯದೆ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ವೇಗ ನೀಡುವ ಮಹತ್ವದ ವೇದಿಕೆಯಾಗಬೇಕು. ಈ ಭಾಗದ ಜನರು ದಶಕಗಳಿಂದ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಧಿವೇಶನಕ್ಕೆ ಖರ್ಚು ಮಾಡಿದ ಹಣದ ಲೆಕ್ಕ ನೀಡುವುದಕ್ಕಿಂತ ಉತ್ತರ ಕರ್ನಾಟಕದ ಅಭಿವೃದ್ಧಿಯ ಲೆಕ್ಕವನ್ನು ಸರ್ಕಾರ ನೀಡಲಿ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ (ಝಳಕಿ) ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಲಾಗುತ್ತದೆ. ಆದರೆ ಅಧಿವೇಶನ ಮುಗಿದ ನಂತರವೂ ಉತ್ತರ ಕರ್ನಾಟಕದ ಜನರ ಮೂಲಭೂತ ಸಮಸ್ಯೆಗಳು ಹಾಗೆಯೇ ಉಳಿಯುತ್ತಿವೆ. ಅಧಿವೇಶನವು ಕೇವಲ ಪ್ರತಿಭಟನೆ, ಧರಣಿ, ಆರೋಪ-ಪ್ರತ್ಯಾರೋಪ, ರಾಜಕೀಯ ಮೇಲಾಟ ಹಾಗೂ ಮೋಜು-ಮಸ್ತಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ. ಜನರ ತೆರಿಗೆ ಹಣದಿಂದ ನಡೆಯುವ ಅಧಿವೇಶನ ಜನರ ಬದುಕಿನಲ್ಲಿ ಬದಲಾವಣೆ ತರುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ನೀರಾವರಿ ಮತ್ತು ಕೃಷಿ ಸಮಸ್ಯೆಗಳಿಗೆ ಆದ್ಯತೆ ಅಗತ್ಯ

ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳಲ್ಲಿ ನೀರಾವರಿ ಯೋಜನೆಗಳ ವಿಳಂಬ, ಕೃಷಿ ಸಂಕಷ್ಟ, ರೈತರ ಸಾಲದ ಹೊರೆ, ಕಬ್ಬಿನ ದರ ನಿಗದಿ, ಎಸ್ಎಪಿ ದರ, ಕಾರ್ಖಾನೆಗಳಿಂದ ಬಾಕಿ ಪಾವತಿ ಹಾಗೂ ಕಬ್ಬಿನ ತೂಕದಲ್ಲಿನ ನಿಯಂತ್ರಣದ ಸಮಸ್ಯೆಗಳು ಪ್ರಮುಖವಾಗಿವೆ. ಇವುಗಳ ಕುರಿತು ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಿ ರೈತರಿಗೆ ನ್ಯಾಯ ಒದಗಿಸುವ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕು.

ಇದರ ಜತೆಗೆ ಕೈಗಾರಿಕೆಗಳ ಸ್ಥಾಪನೆ, ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ, ಹದಗೆಟ್ಟ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ, ಪ್ರವಾಹ ಮತ್ತು ಬರ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ಕಿತ್ತೂರು ರಾಣಿ ಚನ್ನಮ್ಮನವರ ಸಮಾಧಿ ಸ್ಥಳದ ಅಭಿವೃದ್ಧಿ ಹಾಗೂ ಅದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ವಿಚಾರವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದರು.

ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ನೀಡಿ

ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮಲಪ್ರಭಾ ಹಾಗೂ ಘಟಪ್ರಭಾ ನೀರಾವರಿ ಯೋಜನೆಗಳ ಏತ ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಮುರಗೋಡ-ಚಚಡಿ ಏತ ನೀರಾವರಿ ಯೋಜನೆಗೆ ಮರುಚಾಲನೆ ನೀಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

ಕೆರೆಗಳ ಪುನಶ್ಚೇತನ, ಕೈಗಾರಿಕಾ ಕಾರಿಡಾರ್ ನಿರ್ಮಾಣ, ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಉತ್ತರ ಕರ್ನಾಟಕಕ್ಕೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು. ಬ್ಯಾಂಕ್ಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜಕೀಯ ಬದಿಗಿಟ್ಟು ಜನಪರ ಚರ್ಚೆಗೆ ಆದ್ಯತೆ ನೀಡಿ

ವಿಧಾನಸಭೆಯ ಪ್ರತಿಯೊಬ್ಬ ಉತ್ತರ ಕರ್ನಾಟಕದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸುವುದರ ಜತೆಗೆ ಇಡೀ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜನಪರ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು.

ಅಧಿವೇಶನದಲ್ಲಿ ಗದ್ದಲ, ಪ್ರತಿಭಟನೆ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ಬದಲು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಆರೋಗ್ಯಕರ ಚರ್ಚೆಗೆ ಆದ್ಯತೆ ನೀಡಬೇಕು. ಚರ್ಚೆಯಲ್ಲಿ ಕೈಗೊಂಡ ನಿರ್ಧಾರಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂದು ಸಲಹೆ ನೀಡಿದರು.

ಒಂದು ತಿಂಗಳ ಕಾಲ ಅಧಿವೇಶನ ನಡೆಸಲು ಒತ್ತಾಯ

ಉತ್ತರ ಕರ್ನಾಟಕದ ಸಮಸ್ಯೆಗಳ ಸಮಗ್ರ ಚರ್ಚೆ ಮತ್ತು ಪರಿಹಾರಕ್ಕಾಗಿ ಬೆಳಗಾವಿ ಅಧಿವೇಶನವನ್ನು ಕನಿಷ್ಠ ಒಂದು ತಿಂಗಳ ಕಾಲ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಕಾರ್ಯಸೂಚಿ ರೂಪಿಸಿ, ಪ್ರತಿಯೊಂದು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿ, ಅನುದಾನದ ಬಳಕೆ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ಪಡೆದು, ಅವುಗಳ ಅನುಷ್ಠಾನಕ್ಕೆ ನಿರ್ದಿಷ್ಟ ಕಾಲಮಿತಿ ಮತ್ತು ಜವಾಬ್ದಾರಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಚಳಿಗಾಲದ ಅಧಿವೇಶನವು ಕೇವಲ ರಾಜಕೀಯ ನಾಯಕರ ಭೇಟಿಗೆ, ಪ್ರತಿಭಟನೆಗಳಿಗೆ ಹಾಗೂ ದುಂದು ವೆಚ್ಚಕ್ಕೆ ಸೀಮಿತವಾಗಬಾರದು. ಬದಲಾಗಿ ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ಈ ಭಾಗದ ಅಭಿವೃದ್ಧಿಯ ಭವಿಷ್ಯ ರೂಪಿಸುವ ಜನಪರ ಅಧಿವೇಶನವಾಗಬೇಕು.

ಪ್ರತಿ ವರ್ಷ ಉತ್ತರ ಕರ್ನಾಟಕದ ಜನ ಬೆಳಗಾವಿ ಅಧಿವೇಶನದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಈ ಬಾರಿಯಾದರೂ ಅವರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಬೇಕು. ಜನರಿಗೆ ಕೇವಲ ಭರವಸೆ ನೀಡದೆ ಕಾರ್ಯರೂಪದ ಫಲಿತಾಂಶ ತೋರಿಸುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಸಂದೀಪ ಪಾಟೀಲ (ಝಳಕಿ) ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande