
ವಿಜಯಪುರ, 18 ನವೆಂಬರ್ (ಹಿ.ಸ.)
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಹೊಳೆಹಂಗರಗಿ ಗ್ರಾಮದಲ್ಲಿ ಭಕ್ತಿ, ಧಾರ್ಮಿಕ ಶ್ರದ್ಧೆ ಹಾಗೂ ಆಧ್ಯಾತ್ಮಿಕ ಸಂಭ್ರಮದ ವಾತಾವರಣದಲ್ಲಿ ಶ್ರೀ ಮಲ್ಲಿಕಾರ್ಜುನ ನೂತನ ದೇವಾಲಯದ ಲೋಕಾರ್ಪಣೆ, ಮಹಾಲಿಂಗ ಪ್ರತಿಷ್ಠಾಪನೆ, ನೂತನ ಗೋಪುರ ಕಳಸಾರೋಹಣ ಹಾಗೂ ಭಾವೈಕ್ಯ ಧರ್ಮ ಸಮ್ಮೇಳನ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಪಾಲ್ಗೊಂಡು, ಶ್ರೀಶೈಲ ಮಹಾಪೀಠದ ಪೀಠಾಧೀಶರಾದ ಶ್ರೀ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದ ಪಡೆದುಕೊಂಡರು. ಬಳಿಕ ಪೂಜ್ಯರ ಸಾನ್ನಿಧ್ಯದಲ್ಲಿ ನೂತನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಮಹಾಲಿಂಗ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರದ ಕಳಸಾರೋಹಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿದ್ದು, ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯ ಧರ್ಮ ಸಮ್ಮೇಳನವು ಸೌಹಾರ್ದತೆ, ಧಾರ್ಮಿಕ ಸಾಮರಸ್ಯ ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಸುವ ಸಂದೇಶ ಸಾರಿತು.
ಈ ಸಂದರ್ಭದಲ್ಲಿ ಕಲ್ಯಾಣ ಹಿರೇಮಠ, ಗಿರಿಸಾಗರದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಮಮದಾಪುರದ ಶ್ರೀ ಮ.ನಿ.ಪ್ರ. ಅಭಿನವ ಮುರಘೇಂದ್ರ ಮಹಾಸ್ವಾಮಿಗಳು ಹಾಗೂ ಮಸೂತಿಯ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೂಜ್ಯರು ಉಪಸ್ಥಿತರಿದ್ದು, ಭಕ್ತರಿಗೆ ಆಶೀರ್ವಚನ ನೀಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವರಾಜ ದೇಸಾಯಿ ಸೇರಿದಂತೆ ಗ್ರಾಮದ ಗುರುಹಿರಿಯರು, ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಸಮಸ್ತ ಭಕ್ತ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೂತನ ದೇವಾಲಯದ ನಿರ್ಮಾಣ ಮತ್ತು ಲೋಕಾರ್ಪಣೆಯ ಮೂಲಕ ಹೊಳೆಹಂಗರಗಿ ಗ್ರಾಮದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆತಿದ್ದು, ಕಾರ್ಯಕ್ರಮವು ಭಕ್ತರ ಪಾಲಿಗೆ ಸ್ಮರಣೀಯ ಕ್ಷಣವಾಗಿ ಮೂಡಿಬಂತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande