ಮರ ಕಡಿಯುವ ವೇಳೆ ಧರೆಗುರುಳಿದ ಬೃಹತ್ ಮರ; ಎರಡು ಕಾರು ಜಖಂ
ಗದಗ, 18 ನವೆಂಬರ್ (ಹಿ.ಸ.) ಗದಗ ನಗರದ ತಹಶೀಲ್ದಾರ್ ಕಚೇರಿ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಬೃಹತ್ ಮರವೊಂದನ್ನು ಕಡಿಯುವ ವೇಳೆ ಏಕಾಏಕಿ ಮರ ಧರೆಗುರುಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ, ಸಮೀಪದಲ್ಲಿದ್ದ ಜೆರಾಕ್ಸ್ ಅಂಗಡಿಗಳಿಗೂ ಹಾನಿಯಾಗಿದೆ. ತಹಶೀ
ಫೋಟೋ


ಗದಗ, 18 ನವೆಂಬರ್ (ಹಿ.ಸ.)

ಗದಗ ನಗರದ ತಹಶೀಲ್ದಾರ್ ಕಚೇರಿ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಬೃಹತ್ ಮರವೊಂದನ್ನು ಕಡಿಯುವ ವೇಳೆ ಏಕಾಏಕಿ ಮರ ಧರೆಗುರುಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ, ಸಮೀಪದಲ್ಲಿದ್ದ ಜೆರಾಕ್ಸ್ ಅಂಗಡಿಗಳಿಗೂ ಹಾನಿಯಾಗಿದೆ.

ತಹಶೀಲ್ದಾರ್ ಕಚೇರಿ ಕಟ್ಟಡ ಕಾಮಗಾರಿ ಹಿನ್ನೆಲೆಯಲ್ಲಿ ಬೃಹತ್ ಮರವನ್ನು ಕಡಿಯುವ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮರ ಏಕಾಏಕಿ ಉರುಳಿಬಿದ್ದಿದೆ. ಮರ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಮರದಡಿ ಸಿಲುಕಿ ಎರಡು ಕಾರುಗಳು ಹಾನಿಗೀಡಾಗಿದ್ದು, ಸಮೀಪದ ಜೆರಾಕ್ಸ್ ಅಂಗಡಿಗಳಿಗೂ ಹಾನಿಯಾಗಿದೆ.

ಮರ ಕಡಿಯುವ ಸಂದರ್ಭದಲ್ಲಿ ಯಾವುದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯದಿಂದ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಂಚಾರವಿರುವ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಮರ ಕಡಿಯಲು ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ವೇಳೆ ಮರ ಬಿದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಇಂತಹ ಘಟನೆ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಕಾರು ಮಾಲೀಕ ವಿದ್ಯಾಧರ ದೊಡ್ಡಮನಿ ಪ್ರಶ್ನಿಸಿದ್ದಾರೆ.

ವಿಷಯ ತಿಳಿದು ಗದಗ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಬೇಕು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande