
ಗದಗ, 18 ನವೆಂಬರ್ (ಹಿ.ಸ.)
ಗದಗ ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿದ್ಯುತ್ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಸ್ಕಾಂ ವತಿಯಿಂದ ಜಿಲ್ಲೆಯಾದ್ಯಂತ ವಿದ್ಯುತ್ ಮಾರ್ಗಗಳ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ.
ರೈತರು, ಸಾರ್ವಜನಿಕರು, ಬೆಳೆಗಳು ಹಾಗೂ ಆಸ್ತಿಪಾಸ್ತಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಹೆಸ್ಕಾಂ ಅಧಿಕಾರಿಗಳು, ವಾಲಿರುವ ವಿದ್ಯುತ್ ಕಂಬಗಳನ್ನು ನೇರಗೊಳಿಸುವುದು, ಮುರಿದ ಕಂಬಗಳ ಬದಲಾವಣೆ, ಅರ್ಥಿಂಗ್ ವ್ಯವಸ್ಥೆ ಸುಧಾರಣೆ, ವಿದ್ಯುತ್ ತಂತಿಗಳನ್ನು ಬಿಗಿಗೊಳಿಸುವುದು ಮತ್ತು ವಿದ್ಯುತ್ ಮಾರ್ಗಗಳಿಗೆ ಅಡ್ಡಿಯಾಗಿರುವ ಗಿಡಗಂಟೆಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
ಲಕ್ಷ್ಮೇಶ್ವರದ ಕಾಳಮ್ಮ ಟಿಸಿ ಬಳಿ ಅರ್ಥಿಂಗ್ ವ್ಯವಸ್ಥೆಯ ದುರಸ್ತಿ ಹಾಗೂ ಬಾಗಿದ್ದ ವಿದ್ಯುತ್ ಕಂಬವನ್ನು ನೇರಗೊಳಿಸಲಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಫೀಡರ್ ನಿರ್ವಹಣೆ, ಎಫ್-3 ಮಾರ್ಗದಲ್ಲಿ ಗಿಡಗಂಟೆಗಳ ತೆರವು ಹಾಗೂ ಕಲ್ಲೂರು ಗ್ರಾಮದಲ್ಲಿ ಎಲ್ಟಿ ವಿದ್ಯುತ್ ತಂತಿಗಳ ದುರಸ್ತಿ ಕೈಗೊಳ್ಳಲಾಗಿದೆ. ಮುಳಗುಂದ ಗ್ರಾಮದ ಎಫ್-9 ಬಸಾಪುರ ಎನ್ಜೆವೈ ಮಾರ್ಗದಲ್ಲಿಯೂ ವಿದ್ಯುತ್ ಮಾರ್ಗಕ್ಕೆ ಅಡ್ಡಿಯಾಗಿದ್ದ ಗಿಡಗಂಟೆಗಳನ್ನು ತೆರವುಗೊಳಿಸಲಾಗಿದೆ.
ನರಗುಂದ ಉಪವಿಭಾಗದ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಯ ಸಮೀಪ ವಾಲಿದ್ದ ವಿದ್ಯುತ್ ಕಂಬಗಳನ್ನು ನೇರಗೊಳಿಸಲಾಗಿದೆ. ಹೊಳೆಆಳೂರು ಶಾಖೆಯ ಗಾಡಗೊಳಿ ಎನ್ಜೆವೈ ವ್ಯಾಪ್ತಿಯಲ್ಲಿಯೂ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದ ಎಫ್-3 ಹೊಂಬಳ ಫೀಡರ್ ವ್ಯಾಪ್ತಿಯ ಬೆಳಹೊಡ ಗ್ರಾಮದಲ್ಲಿ ಎಲ್ಟಿ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸಲಾಗಿದೆ.
ಇನ್ನು ಗದಗ ವಿಭಾಗದ ರಾಮಗಿರಿ ಎನ್ಜೆವೈ ಮಾರ್ಗದಲ್ಲಿ ಸುಮಾರು 15 ಕಿ.ಮೀ. ಉದ್ದದ ವಿದ್ಯುತ್ ಮಾರ್ಗದ ಸುತ್ತಮುತ್ತ ಬೆಳೆದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲೆಯ ಇತರೆ ಭಾಗಗಳಲ್ಲಿಯೂ ನಿರ್ವಹಣಾ ಕಾರ್ಯಗಳು ಪ್ರಗತಿಯಲ್ಲಿವೆ.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನದಂತೆ ಗದಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ರೋಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ವಿವಿಧ ವಿಭಾಗ ಹಾಗೂ ಉಪವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವಿದ್ಯುತ್ ಜಾಲದ ಸುಸ್ಥಿರತೆ ಕಾಪಾಡುವುದರೊಂದಿಗೆ ನಿರಂತರ ಹಾಗೂ ಸುರಕ್ಷಿತ ವಿದ್ಯುತ್ ಪೂರೈಕೆ ಖಾತರಿಪಡಿಸುವುದು ಹೆಸ್ಕಾಂನ ಉದ್ದೇಶವಾಗಿದೆ. ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿ ಹಾಗೂ ರೈತರ ಬೆಳೆಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸುರಕ್ಷತೆಯೇ ನಮ್ಮ ಮುಖ್ಯ ಧ್ಯೇಯವಾಗಿದೆ ಎಂದು ಗದಗ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP