ಒಪ್ಪಂದದಂತೆ ಪರಿಹಾರ ನೀಡದ ಗುಲ್ಬರ್ಗ ಸಿಮೆಂಟ್ ಕಂಪನಿ: ರೈತರ ಸತ್ಯಾಗ್ರಹ
ಬಾಕಿ ಉಳಿದಿರುವ ಎಕರೆಗೆ 4 ಲಕ್ಷ ರೂ. ಪಾವತಿಗೆ ಆಗ್ರಹ | ಖಾಯಂ ಉದ್ಯೋಗ ನೀಡದಿದ್ದರೆ ಭೂಮಿ ಹಿಂದಿರುಗಿಸುವಂತೆ ಒತ್ತಾಯ
Gulbarga-Cement-Company-Farmers-Protest-Land-Compensation-Pending-Dues-Kalaburagi


ಕಲಬುರಗಿ, 18 ನವೆಂಬರ್ (ಹಿ.ಸ.):

ಭೂಮಿ ಸ್ವಾಧೀನಪಡಿಸಿಕೊಂಡು ವರ್ಷಗಳೇ ಕಳೆದರೂ ಒಪ್ಪಂದದಂತೆ ಪರಿಹಾರ ನೀಡದೆ ಹಾಗೂ ಕಾರ್ಖಾನೆಯನ್ನೂ ಸಂಪೂರ್ಣವಾಗಿ ಸ್ಥಾಪಿಸದೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಗುಲ್ಬರ್ಗ ಸಿಮೆಂಟ್ ಕಂಪನಿ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ.

ಕಲಬುರಗಿ ತಾಲೂಕಿನ ಕಿರಣಗಿ, ಸೋಮನಾಥ ಹಳ್ಳಿ ಹಾಗೂ ಫಿರೋಜಾಬಾದ್ ಗ್ರಾಮದ ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ಆರಂಭಿಸಿದ್ದಾರೆ.

2013ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಗುಲ್ಬರ್ಗ ಸಿಮೆಂಟ್ ಕಂಪನಿಗೆ 1,821 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಭೂಮಿ ಸ್ವಾಧೀನಪಡಿಸಿಕೊಂಡ ಐದು ವರ್ಷಗಳೊಳಗೆ ಕಾರ್ಖಾನೆ ಸ್ಥಾಪಿಸಬೇಕೆಂಬ ಒಪ್ಪಂದವಿದ್ದರೂ, ಈವರೆಗೂ ಕಂಪನಿ ಸಂಪೂರ್ಣವಾಗಿ ಸ್ಥಾಪನೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತಿ ಎಕರೆಗೆ 16 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂಪನಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 2010ರಲ್ಲಿ 3 ಲಕ್ಷ ರೂ., 2013ರಲ್ಲಿ 1 ಲಕ್ಷ ರೂ. ಹಾಗೂ ನಂತರ 8 ಲಕ್ಷ ರೂ. ಸೇರಿದಂತೆ ಒಟ್ಟು 12 ಲಕ್ಷ ರೂ. ಪಾವತಿಸಲಾಗಿದೆ. ಆದರೆ, ಪ್ರತಿ ಎಕರೆಗೆ ಇನ್ನೂ 4 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ ಎಂದು ರೈತರು ದೂರಿದ್ದಾರೆ.

ಬಾಕಿ ಇರುವ ಪ್ರತಿ ಎಕರೆಗೆ 4 ಲಕ್ಷ ರೂ. ಹಣವನ್ನು ತಕ್ಷಣ ಪಾವತಿಸಬೇಕು. ಜತೆಗೆ ಭೂಮಿ ಕಳೆದುಕೊಂಡ ರೈತರಿಗೆ ಕಂಪನಿಯಲ್ಲಿ ಖಾಯಂ ಉದ್ಯೋಗ ನೀಡಬೇಕು ಎಂಬುದು ಹೋರಾಟಗಾರರ ಪ್ರಮುಖ ಆಗ್ರಹವಾಗಿದೆ.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಪ್ರಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ರೈತ ಮುಖಂಡ ಶಂಕರಪ್ಪ ಗೊಬ್ಬುರ್, ಕಂಪನಿ ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿ ಎಕರೆಗೆ ಇನ್ನೂ 4 ಲಕ್ಷ ರೂ. ಬಾಕಿ ಹಣ ನೀಡಬೇಕಿದೆ.

ಜತೆಗೆ ಭೂಮಿ ಕಳೆದುಕೊಂಡ ರೈತರಿಗೆ ಕಂಪನಿಯಲ್ಲಿ ಖಾಯಂ ಉದ್ಯೋಗ ಕಲ್ಪಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ನಮ್ಮ ಭೂಮಿಯನ್ನು ನಮಗೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಕಂಪನಿಯ ವಿರುದ್ಧ ರೈತರು ಸತ್ಯಾಗ್ರಹದ ಹಾದಿ ಹಿಡಿದಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande