
ಬೆಂಗಳೂರು, 18 ನವೆಂಬರ್ (ಹಿ.ಸ.):
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಮಾಜಿ ಸಂಸದ ಡಿ.ಕೆ. ಸುರೇಶ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಊಟವೂ ಸೇರಲ್ಲ, ನಿದ್ದೆಯೂ ಬರಲ್ಲ ಎಂದು ವ್ಯಂಗ್ಯವಾಡಿರುವ ಅವರು, ‘ಚಪಲ ಚನ್ನಿಗರಾಯ’ ಎಂದು ಕುಟುಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, “ನಾಲಿಗೆಯಲ್ಲಿ ಮೂಳೆ ಇಲ್ಲ ಎಂದು ಏನೇನೋ ಮಾತನಾಡುತ್ತಿರುತ್ತಾರೆ. ಅವರಿಗೆ ಏನು ಹೇಳಲು ಸಾಧ್ಯ? ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಊಟ, ನಿದ್ದೆ ಎರಡೂ ಸೇರಲ್ಲ” ಎಂದು ಟೀಕಿಸಿದ್ದಾರೆ.
ಈ ವೇಳೆ ಪಕ್ಕದಲ್ಲಿದ್ದವರು 'ಮೂರನೆಯದೂ ಸೇರಲ್ಲ' ಎಂದು ಹೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸುರೇಶ್, “ಮೂರೂ ಸೇರದೇ ಇರುವವರಿಗೆ ನಾವೇನು ಮಾಡಲು ಸಾಧ್ಯ? ನೀವಾದರೂ ಕನಿಷ್ಠ ಊಟವನ್ನಾದರೂ ಮಾಡಿಸಿ” ಎಂದು ಹಾಸ್ಯಭರಿತವಾಗಿ ವ್ಯಂಗ್ಯವಾಡಿದ್ದಾರೆ.
“ಅವರು ದೊಡ್ಡವರು, ಬಾಯಿಗೆ ಬಂದಿದ್ದನ್ನು ಮಾತನಾಡುತ್ತಿರುತ್ತಾರೆ. ಚಪಲ ಚನ್ನಿಗರಾಯ ಅಂತಾರಲ್ಲ, ಅಂತವರನ್ನು ಏನು ಮಾಡಲು ಸಾಧ್ಯ?” ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ಹಾಗೂ ಕರಾವಳಿ ಭಾಗದ ಸಭೆಗಳು ಕೇವಲ ವ್ಯವಹಾರ ವಿಸ್ತರಣೆಯ ಉದ್ದೇಶದಿಂದ ನಡೆದಿವೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಸುರೇಶ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ ಹಾಗೂ ಕರಾವಳಿ ಭಾಗದಲ್ಲಿಯೂ ವ್ಯವಹಾರ ವಿಸ್ತರಿಸುವ ಉದ್ದೇಶದಿಂದಲೇ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R