ವಿಮಾನ ನಿಲ್ದಾಣಗಳ ನಿರ್ಮಾಣವಷ್ಟೇ ಅಲ್ಲ, ನಿರಂತರ ವಿಮಾನ ಹಾರಾಟವೂ ನಮ್ಮ ಆದ್ಯತೆ
ವಿಜಯಪುರ, 18 ನವೆಂಬರ್ (ಹಿ.ಸ.) ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದಷ್ಟೇ ಸರ್ಕಾರದ ಉದ್ದೇಶವಲ್ಲ. ನಿರ್ಮಾಣಗೊಂಡ ವಿಮಾನ ನಿಲ್ದಾಣಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ವಿಮಾನಯಾನ ಸೇವೆ ಲಭ್ಯವಾಗಬೇಕು ಎಂಬುದು ಸರ್ಕಾರದ ಪ್ರಮುಖ ಆದ್ಯತೆ
ವಿಮಾನ. ಇಲ್ಡನ


ವಿಜಯಪುರ, 18 ನವೆಂಬರ್ (ಹಿ.ಸ.)

ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದಷ್ಟೇ ಸರ್ಕಾರದ ಉದ್ದೇಶವಲ್ಲ. ನಿರ್ಮಾಣಗೊಂಡ ವಿಮಾನ ನಿಲ್ದಾಣಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ವಿಮಾನಯಾನ ಸೇವೆ ಲಭ್ಯವಾಗಬೇಕು ಎಂಬುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಗಳು ವಿಮಾನಗಳ ಹಾರಾಟವಿಲ್ಲದೆ ನಿಷ್ಕ್ರಿಯವಾಗಿರುವುದು ಸರಿಯಲ್ಲ. ಪ್ರತಿಯೊಂದು ವಿಮಾನ ನಿಲ್ದಾಣವೂ ಜನರ ಬಳಕೆಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳನ್ನು ಒಳಗೊಂಡ ಸಮಗ್ರ ವಿಮಾನಯಾನ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಿಮಾನಯಾನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದ ನಂತರ ಅಲ್ಲಿ ವಿಮಾನಗಳ ಹಾರಾಟವೇ ಇಲ್ಲದಿದ್ದರೆ ಆ ಮೂಲಸೌಕರ್ಯ ನಿರ್ಮಾಣದ ಉದ್ದೇಶ ಈಡೇರಿದಂತಾಗುವುದಿಲ್ಲ. ಹೀಗಾಗಿ ವಿಮಾನ ನಿಲ್ದಾಣಗಳ ನಿರಂತರ ಕಾರ್ಯಾಚರಣೆಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.

ಪ್ರತಿ ನಿಲ್ದಾಣದಿಂದ ದಿನಕ್ಕೊಂದು ವಿಮಾನ ಹಾರಾಟದ ಗುರಿ

ರಾಜ್ಯದ ಪ್ರತಿಯೊಂದು ವಿಮಾನ ನಿಲ್ದಾಣದಿಂದಲೂ ದಿನಕ್ಕೆ ಕನಿಷ್ಠ ಒಂದು ವಿಮಾನವಾದರೂ ಹಾರಾಟ ನಡೆಸುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದರಿಂದ ಆಯಾ ಭಾಗದ ಜನರಿಗೆ ಸುಲಭವಾಗಿ ವಿಮಾನಯಾನ ಸೌಲಭ್ಯ ದೊರೆಯುವುದರ ಜತೆಗೆ ವ್ಯಾಪಾರ, ಉದ್ಯಮ, ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ.

ಸಮಗ್ರ ವಿಮಾನಯಾನ ನೀತಿಯ ಮೂಲಕ ರಾಜ್ಯದ ವಿವಿಧ ನಗರಗಳ ನಡುವಿನ ಸಂಪರ್ಕ ಮತ್ತು ಇತರ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಮಾನ ನಿಲ್ದಾಣಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ವಿಮಾನಯಾನ ಸೇವೆ ಪುನರಾರಂಭಕ್ಕೆ ಸ್ವಾಗತ

ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಉಡಾನ್ ಯೋಜನೆಯಡಿ ಶಿವಮೊಗ್ಗಕ್ಕೆ ವಿಮಾನಯಾನ ಸೇವೆಯನ್ನು ಮತ್ತೆ ಕಲ್ಪಿಸಲು ಪ್ರಯತ್ನಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಸಚಿವರು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ಪುನರಾರಂಭಿಸುವ ಪ್ರಯತ್ನ ಯಶಸ್ವಿಯಾದರೆ ಅದರಿಂದ ರಾಜ್ಯದ ಇತರ 17 ವಿಮಾನ ನಿಲ್ದಾಣಗಳಿಗೂ ಅನುಕೂಲವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನ ಫಲಿಸಿದರೆ ಸಂತೋಷದ ಸಂಗತಿ ಎಂದರು.

ಒಂದು ವೇಳೆ ಆ ಪ್ರಯತ್ನ ನಿರೀಕ್ಷಿತ ಫಲ ನೀಡದಿದ್ದರೂ ಸರ್ಕಾರ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಿಗೂ ವಿಮಾನಯಾನ ಸೇವೆ ವಿಸ್ತರಿಸುವ ಉದ್ದೇಶದಿಂದ ನಮ್ಮದೇ ಆದ ಸಮಗ್ರ ವಿಮಾನಯಾನ ನೀತಿಯನ್ನು ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.

ರಾಜ್ಯದ ವಿಮಾನಯಾನ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಈ ನೀತಿಯು ಪ್ರಾದೇಶಿಕ ವಿಮಾನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ, ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿಗೂ ಸಹಕಾರಿಯಾಗುವ ನಿರೀಕ್ಷೆಯಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande