
ನವದೆಹಲಿ, 16 ನವೆಂಬರ್ (ಹಿ.ಸ.):
ದೇಶಾದ್ಯಂತ ನಾಲ್ಕು ದಿನಗಳ ಕಾಲ ಆಚರಿಸಲಾದ ಛಠ್ ಮಹಾಪರ್ವವು ಇಂದು ಉದಯ ಸೂರ್ಯನಿಗೆ ಅರ್ಘ್ಯ ಸಮರ್ಪಿಸುವುದರೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛಠಿ ಮಾತೆಗೆ ದೇಶದ ಎಲ್ಲ ಜನರ ಮೇಲೂ ಕೃಪೆ ಮತ್ತು ಆಶೀರ್ವಾದವನ್ನು ಕರುಣಿಸುವಂತೆ ಪ್ರಾರ್ಥಿಸಿದ್ದಾರೆ.
ನವೆಂಬರ್ 13ರಂದು ನಹಾಯ್-ಖಾಯ್ ಆಚರಣೆಯೊಂದಿಗೆ ಆರಂಭವಾಗಿದ್ದ ನಾಲ್ಕು ದಿನಗಳ ಛಠ್ ಹಬ್ಬವು ಇಂದು ಬೆಳಿಗ್ಗೆ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಮೂಲಕ ಪೂರ್ಣಗೊಂಡಿತು. 36 ಗಂಟೆಗಳ ಕಾಲ ನಿರ್ಜಲ ಉಪವಾಸ ಕೈಗೊಂಡಿದ್ದ ವ್ರತಧಾರಿಗಳು ಸೂರ್ಯನಿಗೆ ಅರ್ಘ್ಯ ಸಮರ್ಪಿಸಿದ ಬಳಿಕ ತಮ್ಮ ಧಾರ್ಮಿಕ ಆಚರಣೆಯನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಠೇಕ್ವಾ ಪ್ರಸಾದವನ್ನು ವಿತರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ ಸುಮಾರು 7 ಗಂಟೆಗೆ ತಮ್ಮ ವಾಟ್ಸ್ಆ್ಯಪ್ ವಾಹಿನಿಯಲ್ಲಿ ಸಂದೇಶ ಪ್ರಕಟಿಸಿ, ಛಠ್ ಮಹಾಪರ್ವದ ಸಮಾಪ್ತಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
'ಉದಯಿಸುತ್ತಿರುವ ಸೂರ್ಯದೇವನಿಗೆ ಅರ್ಘ್ಯ ಸಮರ್ಪಿಸುವುದರೊಂದಿಗೆ ನಾಲ್ಕು ದಿನಗಳ ಛಠ್ ಮಹಾಪರ್ವದ ಆಚರಣೆ ಇಂದು ಸಂಪನ್ನಗೊಂಡಿದೆ. ಪ್ರಕೃತಿಗೆ ಸಮರ್ಪಿತವಾದ ಈ ದಿವ್ಯ ಉತ್ಸವದಲ್ಲಿ ದೃಢ ಸಂಕಲ್ಪ ಮತ್ತು ಆಧ್ಯಾತ್ಮಿಕ ಸಾಧನೆಯ ಅದ್ಭುತ ಸಂಗಮ ಕಂಡುಬಂದಿದೆ. ಛಠಿ ಮಾತೆಯು ಎಲ್ಲ ವ್ರತಧಾರಿಗಳ ಜೊತೆಗೆ ದೇಶದ ಎಲ್ಲ ಕುಟುಂಬದವರಿಗೂ ತಮ್ಮ ಶುಭಾಶೀರ್ವಾದವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.
ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಸೇರಿದಂತೆ ವಿವಿಧ ಜಲಮೂಲಗಳ ಬಳಿ ಛಠ್ ಆಚರಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಮಹಾಪರ್ವದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಸಂಸ್ಕೃತಿಯೊಂದಿಗೆ ವಿಶೇಷವಾಗಿ ಬೆಸೆದುಕೊಂಡಿರುವ ಸೂರ್ಯೋಪಾಸನೆಯ ಈ ಮಹಾಪರ್ವವು ದೇಶದ ವಿವಿಧೆಡೆ ಭಕ್ತಿಭಾವದಿಂದ ಆಚರಿಸಲಾಯಿತು. ಘಾಟ್ಗಳಲ್ಲಿ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಬ್ಬಕ್ಕೆ ತೆರೆ ಬಿದ್ದಿತು.
ಉದಯ ಸೂರ್ಯನಿಗೆ ಅರ್ಘ್ಯ ಸಮರ್ಪಿಸಲು ತೆರಳುವ ಭಕ್ತರ ಅನುಕೂಲಕ್ಕಾಗಿ ದೆಹಲಿ ಮೆಟ್ರೊ ಸೇವೆಯನ್ನು ಸಾಮಾನ್ಯ ದಿನಗಳಿಗಿಂತ ಮುಂಚಿತವಾಗಿ ಬೆಳಿಗ್ಗೆ 4.30ರಿಂದಲೇ ಆರಂಭಿಸಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಮೆಟ್ರೊ ರೈಲುಗಳ ಸಂಚಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.