ಗೋವರ್ಧನ ಪೂಜೆಗೆ ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಶುಭಾಶಯ
ನವದೆಹಲಿ, 10 ನವೆಂಬರ್ (ಹಿ.ಸ.): ಗೋವರ್ಧನ ಪೂಜೆಯ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮಂಗಳವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಸಾಮಾಜಿಕ ಜಾಲತಾಣದಲ
प्रतीकात्मक


ನವದೆಹಲಿ, 10 ನವೆಂಬರ್ (ಹಿ.ಸ.):

ಗೋವರ್ಧನ ಪೂಜೆಯ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮಂಗಳವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿ, ಭಗವಾನ್ ಶ್ರೀಕೃಷ್ಣನು ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ. ಈ ಹಬ್ಬವು ಭಕ್ತಿ, ಕೃತಜ್ಞತೆ ಮತ್ತು ಪರಸ್ಪರ ಒಗ್ಗಟ್ಟಿನ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತರಲಿ. ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ಸೌಭಾಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ. ಗೋವರ್ಧನ ಪರ್ವತವನ್ನು ಎತ್ತಿಹಿಡಿದ, ಗೋಪಾಲಕರಿಗೆ ಪ್ರಿಯನಾದ ಹಾಗೂ ಭಕ್ತರ ಎಲ್ಲ ಭಯಗಳನ್ನು ದೂರ ಮಾಡುವ ಶ್ರೀಕೃಷ್ಣನನ್ನು ಸ್ಮರಿಸಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಈ ಹಬ್ಬವು ಪ್ರಕೃತಿ, ಕೃಷಿ, ಗೋಸಂರಕ್ಷಣೆ ಮತ್ತು ಜನಪದ ಸಂಪ್ರದಾಯಗಳ ಬಗೆಗಿನ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಗೋವರ್ಧನ ಪರ್ವತವನ್ನು ಶ್ರೀಕೃಷ್ಣ ಎತ್ತಿಹಿಡಿದ ಪ್ರಸಂಗವು ಪ್ರಕೃತಿಯನ್ನು ರಕ್ಷಿಸುವುದು, ಒಗ್ಗಟ್ಟಿನಿಂದ ಬಾಳುವುದು ಮತ್ತು ಎಲ್ಲ ಜೀವಿಗಳ ಬಗ್ಗೆ ಕರುಣೆ ತೋರುವ ಸಂದೇಶ ನೀಡುತ್ತದೆ. ಗ್ರಾಮೀಣ ಸಂಸ್ಕೃತಿ, ಕೃಷಿ ಸಂಪ್ರದಾಯ ಹಾಗೂ ಜಾನುವಾರುಗಳ ಮಹತ್ವವನ್ನು ಸ್ಮರಿಸುವ ಸಂದರ್ಭವೂ ಇದಾಗಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಈ ಹಬ್ಬವು ಪ್ರಕೃತಿಯ ಬಗೆಗಿನ ಗೌರವ, ಆಹಾರದ ಮಹತ್ವ ಹಾಗೂ ಗೋಸಂರಕ್ಷಣೆ ಮತ್ತು ಗೋವುಗಳ ಆರೈಕೆಯ ಜವಾಬ್ದಾರಿಯನ್ನು ನೆನಪಿಸುತ್ತದೆ. ಕೃತಜ್ಞತೆ, ಒಗ್ಗಟ್ಟು ಮತ್ತು ಸರ್ವರ ಕಲ್ಯಾಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಶ್ರೀಕೃಷ್ಣನ ಕೃಪೆಯಿಂದ ಎಲ್ಲರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಸಂತೋಷ ನೆಲೆಸಲಿ ಎಂದು ಹಾರೈಸಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು, ಯೋಗೇಶ್ವರ ಶ್ರೀಕೃಷ್ಣ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ ಮತ್ತು ಕೀರ್ತಿ ನೀಡಲಿ. ಕೃಷಿ, ಪರಿಸರ ಹಾಗೂ ಗೋಸಂವರ್ಧನೆ ಕ್ಷೇತ್ರಗಳಲ್ಲಿ ನಿರಂತರ ಪ್ರಗತಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು, ಗೋವರ್ಧನ ಪರ್ವತವನ್ನು ಎತ್ತಿ ಗೋಕೂಲದ ಜನರನ್ನು ರಕ್ಷಿಸಿದ ಶ್ರೀಕೃಷ್ಣನ ಸ್ಮರಣೆಯ ಈ ಹಬ್ಬವು ಪ್ರಕೃತಿ, ಜಾನುವಾರು ಮತ್ತು ಆಹಾರದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದ್ದಾರೆ. ಅನ್ನಕೂಟ ಹಬ್ಬವು ಭೂಮಿತಾಯಿ, ಪ್ರಕೃತಿ ಮತ್ತು ಅನ್ನ ನೀಡುವ ರೈತರನ್ನು ಗೌರವಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವ ಪ್ರೇರಣೆ ನೀಡುತ್ತದೆ. ಶ್ರೀಕೃಷ್ಣನ ಕೃಪೆಯಿಂದ ಪ್ರತಿಯೊಂದು ಮನೆಯೂ ಆಹಾರ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಹಾರೈಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande