ದೆಹಲಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ ಬಿಜೆಪಿ: ರಾಹುಲ್ ಗಾಂಧಿ ಆರೋಪ
ನವದೆಹಲಿ, 01 ನವೆಂಬರ್ (ಹಿ.ಸ.): ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿರುವ ಇಂಡಿ ಮೈತ್ರಿಕೂಟದ ‘ಮತ ಉಳಿಸಿ, ದೇಶ ಉಳಿಸಿ’ ಸಮಾವೇಶದ ಅಂಗವಾಗಿ ನಡೆದ ‘ಚಲೋ ದೆಹಲಿ ರಾಮಲೀಲಾ ಮೆರವಣಿಗೆ’ ವೇಳೆ ಕನಾಟ್ ಪ್ಲೇಸ್ ಸೇರಿದಂತೆ ವಿವಿಧ ಮಾರುಕಟ್ಟೆಗಳ ಅಂಗಡಿಗಳನ್ನು ಬಿಜೆಪಿ ಬಲವಂತವಾಗಿ ಮುಚ್ಚಿಸಿದೆ ಎಂದು ಲೋ
‘चलो दिल्ली रामलीला मार्च’ के दौरान  कांग्रेस नेता राहुल गांधी  भाजपा पर आरोप लगते हुए


ನವದೆಹಲಿ, 01 ನವೆಂಬರ್ (ಹಿ.ಸ.):

ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿರುವ ಇಂಡಿ ಮೈತ್ರಿಕೂಟದ ‘ಮತ ಉಳಿಸಿ, ದೇಶ ಉಳಿಸಿ’ ಸಮಾವೇಶದ ಅಂಗವಾಗಿ ನಡೆದ ‘ಚಲೋ ದೆಹಲಿ ರಾಮಲೀಲಾ ಮೆರವಣಿಗೆ’ ವೇಳೆ ಕನಾಟ್ ಪ್ಲೇಸ್ ಸೇರಿದಂತೆ ವಿವಿಧ ಮಾರುಕಟ್ಟೆಗಳ ಅಂಗಡಿಗಳನ್ನು ಬಿಜೆಪಿ ಬಲವಂತವಾಗಿ ಮುಚ್ಚಿಸಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡುವಾಗ ಸ್ಥಳೀಯ ಅಂಗಡಿಗಳಲ್ಲಿ ಖರೀದಿ ಮಾಡುವಂತೆಯೂ ಮನವಿ ಮಾಡಲಾಗಿತ್ತು. ಇದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶವಿತ್ತು. ಆದರೆ, ಕನಾಟ್ ಪ್ಲೇಸ್‌ಗೆ ಆಗಮಿಸಿದಾಗ ಬಿಜೆಪಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿರುವುದು ಗಮನಕ್ಕೆ ಬಂದಿದೆ. ಬಿಜೆಪಿ ವ್ಯಾಪಾರಿಗಳಿಗೆ ನಷ್ಟ ಉಂಟುಮಾಡುತ್ತಿರುವುದನ್ನು ದೇಶವೇ ನೋಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವುದರ ಜತೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ಇಂಡಿ ಮೈತ್ರಿಕೂಟದ ನಾಯಕರು ಸಭೆ ನಡೆಸಿ, ಚುನಾವಣಾ ಆಯೋಗದ ವಿರುದ್ಧ ಜನಾಭಿಯೋಗ ಪ್ರಕ್ರಿಯೆ ಆರಂಭಿಸಿದ್ದರು.

ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ರಾಮಲೀಲಾ ಮೈದಾನದ ಸುತ್ತಮುತ್ತ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ನವದೆಹಲಿ ರೈಲು ನಿಲ್ದಾಣಕ್ಕೆ ತೆರಳುವ ವಾಹನಗಳು, ತುರ್ತು ಸೇವೆಯ ವಾಹನಗಳು ಹಾಗೂ ಆಸ್ಪತ್ರೆಗಳಿಗೆ ತೆರಳುವ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ವಿವಿಧ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಐಟಿಒ ಪ್ರದೇಶದಲ್ಲಿ ಸಂಚಾರ ಸಾಮಾನ್ಯವಾಗಿದ್ದು, ಯಾವುದೇ ವ್ಯತ್ಯಯ ಉಂಟಾಗಿರಲಿಲ್ಲ.

ಆದರೆ, ನವದೆಹಲಿ ಮತ್ತು ಮಧ್ಯ ದೆಹಲಿ ನಡುವಿನ ಸಂಚಾರದ ಮೇಲೆ, ವಿಶೇಷವಾಗಿ ಮಿಂಟೋ ರಸ್ತೆಯಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿತ್ತು.

ಮೆರವಣಿಗೆಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಎನ್‌ಸಿಪಿ-ಎಸ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಕನಾಟ್ ಪ್ಲೇಸ್‌ನಿಂದ ಮಿಂಟೋ ರಸ್ತೆ ಮಾರ್ಗವಾಗಿ ರಾಮಲೀಲಾ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande