
ನವದೆಹಲಿ, 01 ನವೆಂಬರ್ (ಹಿ.ಸ.):
ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಪ್ರತಿಪಕ್ಷಗಳ ಇಂಡಿ ಮೈತ್ರಿಕೂಟದ ವತಿಯಿಂದ ‘ಮತ ಉಳಿಸಿ, ದೇಶ ಉಳಿಸಿ’ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಮತಗಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಈ ಸಮಾವೇಶ ಹಮ್ಮಿಕೊಂಡಿವೆ. ಇದರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೂ ಆಗ್ರಹಿಸಿವೆ.
ಸಮಾವೇಶಕ್ಕೂ ಮುನ್ನ ಪ್ರತಿಪಕ್ಷಗಳ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು. ಬಳಿಕ ತೆರೆದ ಬಸ್ನಲ್ಲಿ ಮೆರವಣಿಗೆಯ ಮೂಲಕ ರಾಮಲೀಲಾ ಮೈದಾನದತ್ತ ಪ್ರಯಾಣ ಬೆಳೆಸಿದರು. ಮಿಂಟೋ ಸೇತುವೆ ಹಾಗೂ ಕನಾಟ್ ಪ್ಲೇಸ್ ಜಂಕ್ಷನ್ನಿಂದ ಆರಂಭವಾದ ಮೆರವಣಿಗೆ ಅಜ್ಮೇರಿ ಗೇಟ್ ಮಾರ್ಗವಾಗಿ ರಾಮಲೀಲಾ ಮೈದಾನ ತಲುಪಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು. ಬಳಿಕ ಮೈದಾನದಲ್ಲಿ ಸಾರ್ವಜನಿಕ ಸಭೆ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಹಾಗೂ ಮಮತಾ ಬ್ಯಾನರ್ಜಿ ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಚುನಾವಣಾ ಅಕ್ರಮಗಳ ವಿರುದ್ಧದ ಹೋರಾಟದ ಭಾಗವಾಗಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಪ್ರತಿಪಕ್ಷಗಳು ತಿಳಿಸಿವೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಬಿಗಿ ಪೊಲೀಸ್ ಭದ್ರತೆ
ಸಮಾವೇಶದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರ ಭದ್ರತಾ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ. ರಾಮಲೀಲಾ ಮೈದಾನವನ್ನು 14 ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯದ ಹೊಣೆಯನ್ನು ಸಹಾಯಕ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ.
ಕಣ್ಗಾವಲಿಗಾಗಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ರೋನ್ಗಳು ಹಾಗೂ ಪೊಲೀಸರ ದೇಹಕ್ಕೆ ಅಳವಡಿಸಿರುವ ಕ್ಯಾಮೆರಾಗಳ ಮೂಲಕವೂ ನಿಗಾ ವಹಿಸಲಾಗುತ್ತಿದೆ. ಮೈದಾನದಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.