
ಚಿಕ್ಕಮಗಳೂರು, 09 ಅಕ್ಟೋಬರ್ (ಹಿ.ಸ.):
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದಡಿ, ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಇದೇ ಸಂದರ್ಭದಲ್ಲಿ ಅನ್ನದಾತರನ್ನು ಸನ್ಮಾನಿಸಲಾಯಿತು.
ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಒಂದು ಗಿಡ ತಾಯಿಯ ಹೆಸರಿನಲ್ಲಿ’ ಎಂಬ ಕರೆಯ ಆಶಯದಂತೆ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು. ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಮತ್ತು ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಲು ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಬೆಳೆಸಬೇಕು ಎಂದು ಸಿ.ಟಿ.ರವಿ ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ರಾಜ್ಯ ಪರಿಶಿಷ್ಟ ಜಾತಿ ಮೋರ್ಚಾದ ಕಾರ್ಯದರ್ಶಿ ಸೀತಾರಾಮ ಭರಣ್ಯ, ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ನಿಶಾಂತ್ ಕೆ.ಸಿ., ಹಿರಿಯ ಮುಖಂಡ ಕೋಟೆ ರಂಗನಾಥ್, ಪರಿಶಿಷ್ಟ ಜಾತಿ ಮೋರ್ಚಾದ ನಗರ ಅಧ್ಯಕ್ಷ ಕೇಶವ ಹಿರೇಮಗಳೂರು, ಮುಖಂಡ ಕಬೀರ್ ಉಪ್ಪಳ್ಳಿ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.