
ಬಳ್ಳಾರಿ, 04 ಅಕ್ಟೋಬರ್ (ಹಿ.ಸ.)
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ 7,561 ಮತದಾರರ ಹೆಸರುಗಳನ್ನು ಅಳಿಸಲು ಹುನ್ನಾರ ನಡೆಸಿಲ್ಲ, ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ಮತದಾರರ ವಿವರಗಳನ್ನು ನಿಯಮಾನುಸಾರ ಪರಿಶೀಲಿಸಲು ಕೋರಿ ಅರ್ಜಿ ಸಲ್ಲಿಸಿದ್ದು ನಿಜ. ಮತದಾರರ ಪಟ್ಟಿಯಲ್ಲಿ ಗೊಂದಲದಲ್ಲಿ ಇರುವ ಹೆಸರುಗಳನ್ನು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಪರಿಶೀಲಿಸಲು ಕೋರಿ ಆಯೋಗಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಆದರೆ, ಯಾವುದೇ ನಿರ್ದಿಷ್ಟ ಸಮುದಾಯ - ಸಮಾಜ ಅಥವಾ ವ್ಯಕ್ತಿ - ಸಮೂಹಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ ಎಂದರು.
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ಕೈಬಿಡುವ ಕುರಿತು ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಕಾನೂನುಬದ್ಧ ಅವಕಾಶ ಕಲ್ಪಿಸಿದೆ. ಮೃತಪಟ್ಟವರು, ಸ್ಥಳಾಂತರ ಆದವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ನೋಂದಣಿ ಆಗಿರುವವರ ಹೆಸರುಗಳ ನೈಜತೆಯನ್ನು ಪರಿಶೀಲಿಸಿ ಅಂಥಹಾ ಹೆಸರುಗಳನ್ನು ತೆಗೆಯುವುದು ಅಥವಾ ಸೇರಿಸುವ ಕೆಲಸ ಚುನಾವಣಾ ಆಯೋಗದ್ದು. ಕಾಂಗ್ರೆಸ್ ಭ್ರಮನಿರಸಗೊಂಡು ಬಿಜೆಪಿಯ ವಿರುದ್ಧ ಆರೋಪಿಸುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು, 7,561 ಮತಗಳನ್ನು ಅಳಿಸಿ ಎಂದು ಬಿಜೆಪಿ ಎಲ್ಲಿಯೂ ಹೇಳಿಲ್ಲ. ಅರ್ಹತೆ ಇಲ್ಲದಿರುವ ಸಾಧ್ಯತೆಯಿರುವ ಹೆಸರುಗಳನ್ನು ಪರಿಶೀಲಿಸಿ, ವಾಸ್ತವಾಂಶದ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಮಾತ್ರ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಂಗ್ರೆಸ್ ಇದನ್ನು ರಾಜಕೀಯವಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಇದೆಲ್ಲಾ ಕಾಂಗ್ರೆಸ್ನ ಭ್ರಮನಿರಸತ್ವಕ್ಕೆ ಸಾಕ್ಷಿ ಎಂದರು.
ಬಿಜೆಪಿಯಲ್ಲಿ ಎಲ್ಲಾ ಸಮುದಾಯದ ಮುಖಂಡರು - ಕಾರ್ಯಕರ್ತರು ಇದ್ದಾರೆ. ಬಿಜೆಪಿ ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲ ವರ್ಗದ ಜನರ ಮತದಾನದ
ಹಕ್ಕನ್ನು ಗೌರವಿಸುತ್ತದೆ. ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಯಾರಿಂದಲೂ ಸಾಧ್ಯವಿಲ್ಲ. ಮತದಾರರ ಹೆಸರನ್ನು ಸೇರಿಸುವುದು - ತೆಗೆಯುವುದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು ಎಂದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 71 ಸಾವಿರ ಅರ್ಜಿಗಳ ಕುರಿತು ಪರಿಶೀಲನೆ ನಡೆದಿದ್ದು, ರೇಷ್ಮಾ ಬಾನು, ಮೆಹಬೂಬ್ ಭಾಷಾ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಒಂದೇ ರೀತಿಯ ಮತದಾರರ ವಿವರಗಳು ಕಂಡುಬಂದಿದೆ. ಬಳ್ಳಾರಿ ನಗರದಲ್ಲಿಯೂ ಒಂದಕ್ಕಿಂತ ಹೆಚ್ಚು ಕಡೆ ಹೆಸರುಗಳಿರುವ ಕುರಿತು ದೂರುಗಳಿವೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿಯೂ ಪಾರ್ವತಿ ಹಾಗೂ ಅವರ ಪತಿ ಹನುಮಂತ ಸೇರಿದಂತೆ ಕೆಲವು ಹೆಸರುಗಳ ಬಗ್ಗೆ ಆಕ್ಷೇಪಣೆಗಳಿವೆ. ಅಧಿಕಾರಿಗಳು ವಾಸ್ತವಾಂಶ ಪರಿಶೀಲಿಸಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ 12,29,579 ಅರ್ಜಿಗಳು ಸಲ್ಲಿಕೆಯಾಗಿವೆ. 10,06,307 ಅರ್ಜಿಗಳ ಪರಿಶೀಲನೆ ಅಥವಾ ಪ್ರಕ್ರಿಯೆ ನಡೆದಿದೆ.
ಬಿಎಲ್ಒಗಳಿಗೆ ಅಗತ್ಯ ತರಬೇತಿ ನೀಡಿ ಸ್ಥಳೀಯವಾಗಿ ಪರಿಶೀಲನೆ ನಡೆಸುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪರಿಶೀಲನೆ ಸಾಧ್ಯವಾಗದ ಪ್ರಕರಣಗಳ ವಿವರಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಈ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು - ಟೀಕೆಗಳು ನಿರಾಧಾರ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್