




ಬಳ್ಳಾರಿ, 04 ಅಕ್ಟೋಬರ್ (ಹಿ.ಸ.)
ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆ, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗಳ ಸಂಸ್ಥಾಪಕ ಮಹಾಗರು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತ್ಯೋತ್ಸವದ ಅಂಗವಾಗಿ 1111 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಭಾನುವಾರ ನಡೆಯಿತು.
ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿಗಳು ಸಾನಿಧ್ಯವಹಿಸಿ, ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಯಿ ಅಂದರೆ ಕೇವಲ ಹೆಣ್ಣು ಅಲ್ಲ, ಮಾತೃ ಹೃದಯದ ಪ್ರತಿಯೊಬ್ಬರೂ ತಾಯಿ ಸ್ಥಾನಕ್ಕೆ - ಗೌರವಕ್ಕೆ ಅರ್ಹರು. ಕಾರಣ ಪ್ರತಿಯೊಬ್ಬ ತಾಯಿಯೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದರು.
ತಾಯಂದಿರರು ಮಕ್ಕಳಿಗೆ ಸಂಬಂಧಗಳ ಬೆಲೆ - ಗೌರವ ಮತ್ತು ಅನಿವಾರ್ಯತೆಗಳ ಮಹತ್ವವನ್ನು ತಿಳಿಸಿಕೊಡಬೇಕು. ಇಲ್ಲವಾದಲ್ಲಿ ಮಕ್ಕಳು ಒಬ್ಬಂಟಿಗರಾಗಿ, ಸಮಾಜದ ಹೊರತಾಗಿ ಜೀವಿಸುವ ಪರಿಸ್ಥಿತಿ ನಿರ್ಮಾಣ ಆಗಲಿದೆ. ಪ್ರತಿಯೊಬ್ಬ ಮಗುವೂ ಸಮಾಜಮುಖಿ ಆಗಬೇಕು ಎನ್ನುವ ಉದಾತ್ತತೆಯು ತಾಯಂದಿರರಲ್ಲಿ ಮೂಡಬೇಕು ಎಂದರು.
ಪ್ರತಿಯೊಬ್ಬರೂ ಸಂತೋಷವಾಗಿರಬೇಕು. ಸಂತೋಷವಾಗಿ ಇರುವವರು ಮಹಾತ್ಮರಂತೆ, ಸಂತರಂತೆ ಇರುತ್ತಾರೆ. ಆದರೆ, ಸಾಮಾನ್ಯರು ಸದಾಕಾಲ ಅಶಾಂತಿ, ಅಸಹನೆ, ಅಸಹಾಕಾರ, ಪ್ರಾಪಂಚಿಕ ಚಿಂತೆಗಳನ್ನು ತುಂಬಿಕೊಂಡು ತೊಳಲಾಡುತ್ತಲೇ ಇರುತ್ತಾರೆ. ಯಾರೇ ಆಗಲಿ ಮನಸ್ಸಿನಲ್ಲಿ ಪ್ರಪಂಚದ ವಿಷಯಗಳನ್ನು ತುಂಬಿಕೊಂಡಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಗಂಗಾವತಿಯ ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ದ್ರಾಕ್ಷಾಯಿಣಿ ಜಿ. ಮಠದ ಅವರು `ತಾಯಿಯ ಋಣ' ಕುರಿತು ಉಪನ್ಯಾಸ ನೀಡಿದರು.
ಕಲ್ಯಾಣ ಮಹಾಸ್ವಾಮಿಗಳು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಎಚ್.ಎಂ. ಗುರುಸಿದ್ದಸ್ವಾಮಿ, ಎಸ್.ಜೆ.ವಿ. ಮಹಿಪಾಲ್, ಡಾ. ಕೆ.ಎಂ. ಮಹೇಶ್ವರಸ್ವಾಮಿ, ಶ್ರೀಮತಿ ಕೆ. ಅನ್ನಪೂರ್ಣಮ್ಮ, ಡಾ. ರೇಣುಕಾ ಮಂಜುನಾಥ್, ಡಾ. ಭಾಗ್ಯಲಕ್ಷ್ಮಿ, ಕಾರ್ಪೊರೇಟರ್ ಶ್ರೀಮತಿ ಸುರೇಖಾ ಮಲ್ಲನಗೌಡ, ಶ್ರೀಮತಿ ಪಲ್ಲೇದ ಮೈತ್ರಿ, ಗುತ್ತಿಗೆದಾರ ಮಸೀದಿಪುರ ಸಿದ್ದರಾಮನಗೌಡ, ನಂದೀಶ ಮಠಂ, ಸಿದ್ದರಾಮ ಕಲ್ಮಠ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೂದುಗುಂಪದ ವಿರುಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಶರಣಯ್ಯ ಎಸ್. ಚರೇದ ಹಾಗೂ ಶ್ರೀಮತಿ ಪಿ. ಭುವನ ಅವರು ಕಾರ್ಯಕ್ರಮ ನಿರೂಪಿಸಿದರು. ದರೂರಿನ ಶ್ರೀಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮಿಗಳು, ಕುರುಗೋಡು ಮತ್ತು ಗರಗ ನಾಗಲಾಪುರದ ವಿರಕ್ತಮಠದ ನಿರಂಜನಪ್ರಭು ಸ್ವಾಮಿಗಳು, ಸೋಮಸಮುದ್ರ ವಿರಕ್ತಮಠದ ಸಿದ್ದಲಿಂಗಸ್ವಾಮಿಗಳು ಮತ್ತು ಶ್ರೀಧರಗಡ್ಡೆಯ ವಿರಕ್ತಮಠದ ಮರಿಕೊಟ್ಟೂರು ದೇಶೀಕರು ವೇದಿಕೆಯಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್