
ಬೆಂಗಳೂರು, 04 ಅಕ್ಟೋಬರ್ (ಹಿ.ಸ.):
ರಾಜ್ಯದ ಬಳಕೆಯಲ್ಲಿರುವ ಜಲಮೂಲಗಳ ಪೈಕಿ ಶೇ.29.8ರಷ್ಟು ಜಲಮೂಲಗಳನ್ನು ಪ್ರಮುಖವಾಗಿ ಅಂತರ್ಜಲ ಮರುಪೂರಣಕ್ಕೆ ಬಳಸಲಾಗುತ್ತಿದ್ದು, ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಎರಡನೇ ಜಲಮೂಲಗಳ ಗಣತಿ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 28,075 ಬಳಕೆಯಲ್ಲಿರುವ ಜಲಮೂಲಗಳಿದ್ದು, ಅವುಗಳ ಪೈಕಿ 8,353 ಜಲಮೂಲಗಳನ್ನು ಅಂತರ್ಜಲ ಮರುಪೂರಣಕ್ಕಾಗಿ ಪ್ರಮುಖವಾಗಿ ಬಳಸಲಾಗುತ್ತಿದೆ.
ತಮಿಳುನಾಡಿನಲ್ಲಿ ಈ ಪ್ರಮಾಣ ಶೇ.34.3ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ.29.8, ತೆಲಂಗಾಣದಲ್ಲಿ ಶೇ.27.5, ಆಂಧ್ರಪ್ರದೇಶದಲ್ಲಿ ಶೇ.19.2 ಹಾಗೂ ಕೇರಳದಲ್ಲಿ ಶೇ.15.3ರಷ್ಟಿದೆ.“ರಾಜ್ಯಗಳ ನಡುವಿನ ಹೋಲಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಬಾರದು.
ಮಳೆಯ ಏರುಪೇರು ಮತ್ತು ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕಕ್ಕೆ ಅಂತರ್ಜಲ ಮರುಪೂರಣವೇ ದೀರ್ಘಕಾಲೀನ ಜಲಭದ್ರತೆಯ ಪ್ರಮುಖ ಆಧಾರ. ಕೆರೆ, ಕಟ್ಟೆ ಮತ್ತು ಟ್ಯಾಂಕ್ಗಳು ಕೇವಲ ನೀರು ಸಂಗ್ರಹಿಸುವ ಮೂಲಗಳಲ್ಲ; ಅವು ಭವಿಷ್ಯದ ಅಂತರ್ಜಲವನ್ನು ಉಳಿಸುವ ವ್ಯವಸ್ಥೆಗಳಾಗಿವೆ,” ಎಂದು ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ರಾಜ್ಯದ ಸುಮಾರು ಶೇ.96ರಷ್ಟು ಜಲಮೂಲಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಹೀಗಾಗಿ ಜಲಮೂಲಗಳ ಸಂರಕ್ಷಣೆ ಹಾಗೂ ಅವುಗಳ ಮರುಪೂರಣ ಸಾಮರ್ಥ್ಯ ಹೆಚ್ಚಿಸುವುದು ಕೃಷಿ, ಕುಡಿಯುವ ನೀರು, ಪಶುಸಂಗೋಪನೆ ಮತ್ತು ಗ್ರಾಮೀಣ ಜಲಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂತರ್ಜಲ ಮರುಪೂರಣಕ್ಕೆ ಪ್ರಮುಖವಾಗಿ ಬಳಕೆಯಾಗುತ್ತಿರುವ 8,353 ಜಲಮೂಲಗಳಲ್ಲಿ 5,302 ಜಲಮೂಲಗಳು, 1,548 ಕೆರೆಗಳು ಹಾಗೂ 1,267 ಕೊಳಗಳು ಸೇರಿವೆ. ಸಾಂಪ್ರದಾಯಿಕ ಜಲಮೂಲಗಳು ಇಂದಿಗೂ ಅಂತರ್ಜಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.
“ಮುಂದಿನ ಹಂತದಲ್ಲಿ ಜಲಾನಯನ ಪ್ರದೇಶಗಳ ಸಂರಕ್ಷಣೆ, ಹೂಳು ತೆರವು, ಕೆರೆಗಳ ಪುನಶ್ಚೇತನ ಹಾಗೂ ಮಳೆನೀರಿನ ಸಂಗ್ರಹವನ್ನು ಅಂತರ್ಜಲ ನಿರ್ವಹಣೆಯೊಂದಿಗೆ ಸಮಗ್ರವಾಗಿ ಜೋಡಿಸಬೇಕು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಮರುಪೂರಣ ಸಾಮರ್ಥ್ಯ ಹೆಚ್ಚಿಸುವುದು ನಮ್ಮ ಆದ್ಯತೆಯಾಗಲಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R