ದಾವಣಗೆರೆ: ಬರಪೀಡಿತ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ
ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಮಳೆ ಕೊರತೆಯಿಂದ ಒಣಗಿರುವ ಮೆಕ್ಕೆಜೋಳ ಬೆಳೆ ಪರಿಶೀಲಿಸಿತು. ರೈತರಿಂದ ಬೆಳೆ ಹಾನಿ, ಬೆಳೆ ವಿಮೆ ಹಾಗೂ ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಿತು.
Davangere-drought-central-team-inspects-damaged-maize-crops-in-neerthadi


ದಾವಣಗೆರೆ, 04 ಅಕ್ಟೋಬರ್ (ಹಿ.ಸ.):

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ಪರಿಶೀಲನೆಗಾಗಿ ಅಂತರ-ಸಚಿವಾಲಯ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮಕ್ಕೆ ಭೇಟಿ ನೀಡಿತು.

ಗ್ರಾಮದ ರೈತರ ಜಮೀನುಗಳಿಗೆ ತೆರಳಿದ ತಂಡ, ಬರದಿಂದ ಸಂಪೂರ್ಣ ಒಣಗಿರುವ ಮೆಕ್ಕೆಜೋಳ ಬೆಳೆಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದುಕೊಂಡಿತು.

ಅಜಿತ್ ಕುಮಾರ್ ಸಾಹು, ಚೇತ್ರಾಮ್ ಮೀನಾ, ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜೆ. ಹರ್ಷಾ ಅವರನ್ನೊಳಗೊಂಡ ಕೇಂದ್ರ ತಂಡ ನೀರ್ಥಡಿ ಗ್ರಾಮದ ರೈತ ವೀರಯ್ಯ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಅವಲೋಕಿಸಿತು. ಈ ವೇಳೆ ನೂರಾರು ಗ್ರಾಮಸ್ಥರು ಹಾಗೂ ರೈತರು ಸ್ಥಳದಲ್ಲಿ ಸೇರಿದ್ದರು.

ಬೆಳೆ ವಿಮೆ ಕುರಿತು ಪ್ರಶ್ನೆರೈತ ವೀರಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಅಧಿಕಾರಿಗಳು, ಬೆಳೆ ವಿಮೆ ಮಾಡಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೀರಯ್ಯ, ಎರಡು ಬಾರಿ ಬೆಳೆ ವಿಮೆ ಮಾಡಿಸಿದ್ದರೂ ಹಣ ಪಾವತಿಯಾಗಿಲ್ಲ ಎಂದು ಅಳಲು ತೋಡಿಕೊಂಡರು.

ಈ ವೇಳೆ ಅಧಿಕಾರಿಗಳು ಬರದಿಂದ ಬೆಳೆ ಹಾನಿಯಾಗಿರುವ ಪ್ರಮಾಣ, ಮಳೆ ಕೊರತೆ ಹಾಗೂ ಕೃಷಿ ಚಟುವಟಿಕೆಗಳ ಕುರಿತು ರೈತರಿಂದ ಮಾಹಿತಿ ಪಡೆದರು. ಬಳಿಕ ಪಕ್ಕದ ರೈತ ದರ್ಶನ ಅವರ ಜಮೀನಿಗೂ ತೆರಳಿ ಮೆಕ್ಕೆಜೋಳ ಬೆಳೆ ಪರಿಸ್ಥಿತಿ ಪರಿಶೀಲಿಸಿದರು.

ಕೆರೆ, ಚೆಕ್ಡ್ಯಾಂ ಇಲ್ಲ: ರೈತರುಈ ಭಾಗದಲ್ಲಿ ನೀರಿನ ಸಂಗ್ರಹಕ್ಕೆ ಸೂಕ್ತವಾದ ಕೆರೆ ಅಥವಾ ಚೆಕ್ಡ್ಯಾಂಗಳಿಲ್ಲ. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಒಣಗಿವೆ ಎಂದು ಗ್ರಾಮಸ್ಥರು ಕೇಂದ್ರ ತಂಡದ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಮಾಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲಾಡಳಿತದಿಂದ ಮಾಹಿತಿಕೇಂದ್ರ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿ, ಮೆಕ್ಕೆಜೋಳ ಹಾಗೂ ರಾಗಿ ಬೆಳೆಗಳ ಹಾನಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಸಾಹಿತ್ಯ ಆಲದಕಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ತಂಡಕ್ಕೆ ಸಾಥ್ ನೀಡಿದರು.

ನೀರ್ಥಡಿ ಗ್ರಾಮದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಬೆಳೆ ಹಾನಿ ಪರಿಶೀಲಿಸಿದ ಕೇಂದ್ರ ತಂಡ, ರೈತರಿಂದ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಪಡೆದುಕೊಂಡು ಮುಂದಿನ ಸ್ಥಳಕ್ಕೆ ತೆರಳಿತು.

ಕೇಂದ್ರ ತಂಡದ ಭೇಟಿ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆ ನಷ್ಟ ಹಾಗೂ ಬರ ಪರಿಸ್ಥಿತಿಯನ್ನು ಅಧಿಕಾರಿಗಳ ಮುಂದೆ ವಿವರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande